ಕೊಪ್ಪಳ : ಜಿಲ್ಲೆಯಲ್ಲಿ ಉತ್ತಮ ಪ್ರವಾಸಿ ತಾಣ ಎಂದು ಹೆಸರಾದ ಸಾಣಾಪುರ ಪ್ರದೇಶದಲ್ಲಿ ಗುರುವಾರ ರಾತ್ರಿ ಪ್ರವಾಸಿಗರ ಮೇಲೆ ಲೈಂಗಿಕ ದೌರ್ಜನ್ಯ ಹಲ್ಲೆ ಯತ್ನ ನಡೆದಿದ್ದು ಐವರ ಪೈಕಿ ಓರ್ವ ಕಾಣೆಯಾಗಿದ್ದಾನೆ.
ಈ ಘಟನೆಯಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಹಣಕ್ಕಾಗಿ ಪೀಡಿಸಿ ಹಲ್ಲೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮೂವರನ್ನು ಕಾಲುವೆಗೆ ನೂಕಲಾಗಿದೆ. ಅದರಲ್ಲಿ ಒಬ್ಬ ಇನ್ನೂ ಪತ್ತೆಯಾಗಿಲ್ಲ.
ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವುದು ಹಂಪಿ.
ಹಾಗೇ ಹಂಪಿ ಪಕ್ಕದ ತುಂಗಭದ್ರಾ ನದಿ ಈಚೆಯ ಪ್ರದೇಶವೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಗುರುವಾರ ರಾತ್ರಿ 11 ರ ಸುಮಾರಿಗೆ ಸಾಣಾಪುರ ಹೋಂ ಸ್ಟೇ ಹತ್ತಿರದಲ್ಲಿ ಅಮೇರಿಕದ ಡ್ಯಾನಿಯಲ್, ನಾಸಿಕ್ ನ ಪಂಕಜ್ ಪಾಟೀಲ್, ಓರಿಸ್ಸಾದ ಬಿಬಾಸ್ ಹಾಗೂ ಇಸ್ರೇಲ್ ನ ಓರ್ವ ಮಹಿಳೆ ಹಾಗೂ ಹೋಂ ಸ್ಟೇಯ ಮಾಲೀಕಳು ಸೇರಿದಂತೆ ಐವರು ಗಿಟಾರ್ ಬಾರಿಸುತ್ತಿದ್ದಾರೆ. ಆಗ ಅಲ್ಲಿಗೆ ಬೈಕ್ ನಲ್ಲಿ ಬಂದ ಮೂವರು ಅಪರಿಚಿತರು ಪೆಟ್ರೋಲ್ ಬೇಕು ಎಂದು ಪೆಟ್ರೋಲ್ ಗೆ ಹಣ ಕೇಳಿದ್ದಾರೆ.
ಇವರು ನಮ್ಮ ಹತ್ತಿರ ಕೇವಲ 20 ರೂಪಾಯಿ ಇದೆ ಎಂದಿದ್ದಾರೆ. ಅವರು ನೂರು ರೂಪಾಯಿ ಕೇಳಿದ್ದಾರೆ. ಇಷ್ಟಕ್ಕೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಮೂವರು ಆಗಂತುಕರು ಮೂವರು ಪ್ರವಾಸಿ ಪುರುಷರನ್ನು ತುಂಗಭದ್ರಾ ನಾಲೆಗೆ ನೂಕಿದ್ದಾರೆ. ಜೊತೆಗಿದ್ದ ಹೊಟೆಲ್ ಮಾಲೀಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ನಾಲೆಗೆ ನೂಕಲ್ಪಟ್ಟಿದ್ದ ಅಮೇರಿಕದ ಡ್ಯಾನಿಯಲ್, ನಾಸಿಕ್ ನ ಪಂಕಜ್ ಬಚಾವ್ ಆಗಿದ್ದು ಓರಿಸ್ಸಾದ ಬಿಬಾಸ್ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ತೆಗಾಗಿ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಶ್ರಮಿಸುತ್ತಿವೆ. ಗಾಯಾಳುಗಳಿಗೆ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಗುರುವಾರ ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ. ರಾಮ್ ಅರಸಿದ್ದಿ , ಬಳ್ಳಾರಿ ವಲಯದ ಐಜಿಪಿ ಲೋಕೇಶಕುಮಾರ ಭೇಟಿ ನೀಡಿದ್ದಾರೆ.
ಆರೋಪಿಗಳ ಬಂಧನಕ್ಕೆ ಪೊಲೀಸರ ಆರು ತಂಡ ರಚಿಸಲಾಗಿದೆ. ಶೀಘ್ರ ಆರೋಪಿಗಳ ಬಂಧನ ಆಗುವ ವಿಶ್ವಾಸ ಪೊಲೀಸ್ ಇಲಾಖೆಯದು.