ಕೊಪ್ಪಳ ಹತ್ತಿರ ಉಕ್ಕಿನ ಕಾರ್ಖಾನೆ ಬೇಡ ಎಂದು ಜಿಲ್ಲೆಯ ಸರ್ವ ಪಕ್ಷಗಳ ನಾಯಕರ ನಿಯೋಗ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಮನವಿ ಸಲ್ಲಿಸಿದಾಗ ಸದ್ಯಕ್ಕೆ ಕಾರ್ಖಾನೆ ಕಾಮಗಾರಿ ನಿಲ್ಲಿಸಿ ಎಂದು ಮುಖ್ಯಮಂತ್ರಿಗಳು ಫೋನ್ ಮೂಲಕ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು.
ಆದರೆ ನಿನ್ನೆ ಬುಧವಾರ ಕೂಡ ಕಾರ್ಖಾನೆಯಲ್ಲಿ ಕಾಮಗಾರಿ ಮುಂದುವರೆದಿತ್ತು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಭೇಟಿ ನೀಡಿದಾಗ ಕಾಮಗಾರಿ ನಡೆದದ್ದು ಕಂಡು ಬಂತು.
ಗುರುವಾರ ಈ ಬಗ್ಗೆ ಮಾಧ್ಯಮಗಳ ವರದಿ ನಂತರ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಾರ್ಖಾನೆ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಜಿಲ್ಲಾಡಳಿತ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಗುರುವಾರ ಮಧ್ಯಾಹ್ನದ ಹೊತ್ತಿಗೆ ಕೊಪ್ಪಳದ ದಲಿತ ಮುಖಂಡರು ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಕಾಮಗಾರಿ ಕಂಡುಬರಲಿಲ್ಲ. ಆದರೆ ಕಾರ್ಖಾನೆಯ ದ್ವಾರದ ಬಳಿ ಹಾಕಿದ ಬಿದಿರು ಮತ್ತು ಕಬ್ಬಿಣದ ಬ್ಯಾರಿಕೇಡ್ ಗಳನ್ನು ಕಿತ್ತು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಸೂಚನೆಯಂತೆ ಕಾಮಗಾರಿ ನಿಂತಿದೆ ಹೀಗಾಗಿ ಕಾರ್ಖಾನೆ ಒಳಗಿರುವ ಬಸಾಪುರ ಕೆರೆಗೆ ಸಾರ್ವಜನಿಕರು ಮುಕ್ತ ಅವಕಾಶ ನೀಡಬೇಕು ಮತ್ತು ಕೆರೆಗೆ ನೀರು ಕುಡಿಸಲು ಜಾನುವಾರು, ಕುರಿಗಳು ಬಂದು ಹೋಗಲು ಅವಕಾಶ ನೀಡಬೇಕು. ಯಾರಿಗೂ ಅಡೆತಡೆ ಮಾಡಬಾರದು ಎಂದು ಈ ಸಂದರ್ಭದಲ್ಲಿ ಮಲ್ಲು ಪೂಜಾರಿ ಸಿದ್ದು ಮಣ್ಣಿನವರ್ ಮೂಕಪ್ಪ ಬಸಾಪುರ ಯಂಕಪ್ಪ ಹೊಸಳ್ಳಿ ಯಲ್ಲಪ್ಪ ಮುದ್ಲಾಪುರ ಯುವ ಕಾಂಗ್ರೆಸ್ ನ ಸಂತೋಷ ಕುರಿ ಹಾಗೂ ಇತರರು ಆಗ್ರಹಿಸಿದರು.