ಕೊಪ್ಪಳ ಬಳಿ ಆರಂಭವಾಗಲಿರುವ ಉಕ್ಕಿನ ಕಾರ್ಖಾನೆ ವಿರುದ್ಧ ಜನಾಂದೋಲನ ನಡೆದ ಹಿನ್ನೆಲೆಯಲ್ಲಿ ಇದೇ ಮಾರ್ಚ್ 4 ಮಂಗಳವಾರ ಕೊಪ್ಪಳ ಜಿಲ್ಲೆಯ ಸರ್ವ ಪಕ್ಷಗಳ ಮುಖಂಡರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ.
ಈ ಬಗ್ಗೆ ಶನಿವಾರ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೊಪ್ಪಳ ಹತ್ತಿರ ಉಕ್ಕಿನ ಕಾರ್ಖಾನೆ ಬೇಡ ಎಂದು ಜನರು ಹೋರಾಟ ಆರಂಭಿಸಿದ್ದಾರೆ. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಕಾರ್ಖಾನೆ ವಿರುದ್ದದ ಬೃಹತ್ ಸಭೆಯಲ್ಲಿ ಮಾತನಾಡಿದ ಶ್ರೀಗಳು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮೂವರೂ ಕಾರ್ಖಾನೆ ಅನುಮತಿ ರದ್ದು ಪಡಿಸಿದ ಆದೇಶ ತೆಗೆದುಕೊಂಡು ಬರಬೇಕು ಎಂದು ಬೃಹತ್ ಸಭೆಯಲ್ಲಿ ಹೇಳಿದ್ದರು.
ಈ ಕುರಿತು ಮಾತನಾಡಿದ ಶಿವರಾಜ ತಂಗಡಗಿ ಶ್ರೀಗಳ ಮಾತಿಗೆ ನಾವು ಮನ್ನಣೆ ಕೊಡುತ್ತೇವೆ. ಹಾಗಾಗಿ ಕೊಪ್ಪಳ ಜಿಲ್ಲೆಯ ಎಲ್ಲ ಪಕ್ಷಗಳ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಒಳಗೊಂಡ ಸರ್ವಪಕ್ಷದ ನಿಯೋಗವನ್ನು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿಸುತ್ತೇವೆ.
ಕಾರ್ಖಾನೆಯ ಬಗ್ಗೆ ಈಗ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಖಾನೆಗೆ ಜನರಿಂದ ವಿರೋಧವಿರುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕಿದೆ. ಮತ್ತೊಮ್ಮೆ ನಾವೂ ಕೂಡ ಗಮನಕ್ಕೆ ತರುತ್ತೇವೆ. ನಾವು ಕೊಪ್ಪಳ ಜಿಲ್ಲೆಯ ಜನರ, ರೈತರ ಹಾಗೂ ಬಡವರ ಪರ ಇರುತ್ತೇವೆ ಎಂದು ತಂಗಡಗಿ ಹೇಳಿದರು.