ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಹತ್ತಿರ ಹಿರೇಹಳ್ಳದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮೇಲೆ ನಡೆದ ಹಲ್ಲೆ ಸಂಬಂಧ ಶನಿವಾರ ಐವರ ವಿರುದ್ದ ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಲಸಿಂದೋಗಿಯ ಗುಡದಪ್ಪ ಕಾಸಲೇರ, ಮಲ್ಲಪ್ಪ ಚಿಕ್ಕೆನಕೊಪ್ಪ , ವೀರಯ್ಯ ಹಿರೇಮಠ, ಶಬ್ಬೀರ ವಾಲಿಕಾರ ಹಾಗೂ ಚಿಕ್ಕೆನಕೊಪ್ಪದ ಯಲ್ಲಪ್ಪ ತಲ್ಲೂರ ವಿರುದ್ದ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ನಾಗರಾಜ ಜಿ.ಕೆ ದೂರು ನೀಡಿದ್ದಾರೆ.
ಹಿರೇಹಳ್ಳದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನಂತೆ ಶುಕ್ರವಾರ ಮಧ್ಯಾಹ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು.
ಹಿರೇಹಳ್ಳದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದನ್ನು ಮತ್ತು ಅಕ್ರಮ ಮರಳು ಸಾಗಾಟವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಮರಳನ್ನು ವಶಕ್ಕೆ ಪಡೆಯಲು ಹೋದಾಗ ಐವರ ತಂಡ ಅಧಿಕಾರಿ ಮೇಲೆ ಹಲ್ಲೆ ಮಾಡಿದೆ.
ಹಲ್ಲೆಗೊಳಗಾದ ಅಧಿಕಾರಿ ಸಚಿನ್ ಗೌರಿಪುರ ಅವರು ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಅಂಬುಲೆನ್ಸ್ ಮೂಲಕ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.