ಕೊಪ್ಪಳ : ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಗೆ ಫೇಮಸ್ ಆಗಿರುವ ಹಿರೇಸಿಂದೋಗಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋದ ಅಧಿಕಾರಿ ಮೇಲೆ ಹಲ್ಲೆಯಾಗಿದೆ.
ಹಲ್ಲೆ ಶುಕ್ರವಾರ ಮಧ್ಯಾಹ್ನ ಹಿರೇಸಿಂದೋಗಿ ಪಕ್ಕದ ಹಿರೇಹಳ್ಳದಲ್ಲಿ ನಡೆದಿದ್ದು ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಚಿನ್ ಗೌರಿಪುರ ಹಲ್ಲೆಗೊಳಗಾದ ಅಧಿಕಾರಿ. ಅಕ್ರಮ ಮರಳು ದಂಧೆಕೋರರಿಂದ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ.
ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಟ್ರಾಕ್ಟರ್ ಮತ್ತು ಟಿಪ್ಪರ್ ಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮತ್ತು ಅಕ್ರಮ ಮರಳುಗಾರಿಕೆಯನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ನಂತರ ಮರಳು ವಶಕ್ಕೆ ಪಡೆಯಲು ಹೋದಾಗ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ದುಷ್ಟರು ಮೊಬೈಲ್ ಕಸಿದು ಹಲ್ಲೆ ನೆಡಸಿದ್ದಾರೆ.
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿರೇಸಿಂದೋಗಿ ಘಟನೆಯಿಂದ ಜಿಲ್ಲೆಯಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ಮುಂದುವರೆದಿವೆ ಈ ಮೂಲಕ ಕಾನೂನು ಕೈಗೆತ್ತಿಕೊಳ್ಳುವುದು ಹೆಚ್ಚುತ್ತಿದೆ. ಇಂಥ ಘಟನೆಗಳಿಂದ ಸರಕಾರಿ ನೌಕರರು ಕೆಲಸ ಮಾಡಲು ಹೆದರುವಂಥ ಸ್ಥಿತಿ ನಿರ್ಮಾಣ ಆಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗೆ ರಕ್ಷಣೆ ಇಲ್ಲ ಎಂಬಂಥ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ.
ಮೊನ್ನೆ ಪಿಡಿಒ ಮೇಲೆ ಗ್ರಾ.ಪಂ. ನಲ್ಲಿಯೆ ಹಲ್ಲೆ ನಡೆದಿತ್ತು. ನಂತರ ಮರುದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ.