Advt. 
 Views   118
Feb 5 2025 10:20PM

ಡಾ ಸಿದ್ದರಾಮ ಹೊನ್ಕಲ್ ಸಮಗ್ರ ಗಜಲ್ ಕೃತಿ ಕುರಿತು ಬರಹ


"ಆಡು ಮುಟ್ಟದ ಸೊಪ್ಪಿಲ್ಲ, ಹೊನ್ಕಲರು ಕೈಯಿಡದ ಸಾಹಿತ್ಯ ಪ್ರಕಾರಗಳಿಲ್ಲ" ಎಂಬ ಮಾತನ್ನು ಇಲ್ಲಿ ನೆನೆಯಲೇಬೇಕು. ಯಾಕೆಂದರೆ ಸಗರನಾಡಿನ ಹಿರಿಯ ಸಾಹಿತಿ ಮೇರು ಸಾಹಿತ್ಯ ಕೃಷಿಕಾರರಾದ ಡಾ. ಸಿದ್ದರಾಮ ಹೊನಕಲ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ನಾವಂತೂ ಅವರಿಗೆ ಅಭಿನಂದನೆ - ಶುಭಾಶಯ ಹೇಳಿ ಹೇಳಿ ಸುಸ್ತಾಗಿದ್ದೆವೆ. ಅಷ್ಟು ಅವರ ಸಾಧನೆಯ ಗ್ರಾಫ್ ಏರುತ್ತಲೇ ಇದೆ ಅಂದರೆ ಅತಿಶಯೋಕ್ತಿಯಲ್ಲ. 

ಸುಮಾರು ಎಪ್ಪತ್ತು ಕೃತಿಗಳ ಬಿಡುಗಡೆ, ನೂರಾರು ಪ್ರಶಸ್ತಿಗಳ ಸ್ವೀಕಾರ, ಸಾವಿರಾರು ಉಪನ್ಯಾಸ, ಕವಿ/ ವಿಚಾರ ಗೋಷ್ಠಿ ಕಾರ್ಯಕ್ರಮಗಳ ಭಾಗವಹಿಸುವಿಕೆ, ಅವರ ಹಲವು ಬರಹಗಳು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಪಠ್ಯವಾಗಿರುವುದು,  ಹತ್ತಾರು ಸಂಘ ಸಂಸ್ಥೆಗಳ ಅಧ್ಯಕ್ಷತೆ- ಸದಸ್ಯತ್ವಗಳ ನಿಭಾಯಿಸುವಿಕೆ, ಕರ್ನಾಟಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಣೆ ಹೀಗೆ ಹಲವಾರು ಕಾರ್ಯಕ್ರಮಗಳ ಆಯೋಜನೆ, ಸದಾ ಸಂಚಾರ, ಸಮಾಜಮುಖಿ ಕಾರ್ಯಕಾರಣ ಯಾವುದಕ್ಕಂತ ಅಭಿನಂದನೆ, ಧನ್ಯವಾದ ಸಲ್ಲಿಸುವುದು ! ಇವರಿಗೆ ಇಷ್ಟೊಂದು ಕಾರ್ಯಗಳತ್ತ ಉತ್ಸಾಹ ಬರುವುದಾದರೂ  ಎಲ್ಲಿಂದ ಎನ್ನುವುದೇ ಯಕ್ಷಪ್ರಶ್ನೆ. ಕಥೆ, ಕಾವ್ಯ, ಕವಿತೆ, ಗಜಲ್, ಹೈಕು, ಶಾಯರಿ, ಹನಿಗಳು, ಚುಟುಕು, ವಚನ, ಪ್ರವಾಸಕಥನ, ಲಲಿತ ಪ್ರಬಂಧ, ಲೇಖನ, ವ್ಯಕ್ತಿ ಚರಿತ್ರೆ, ಸಂಪಾದಿತ ಕೃತಿ, ಹೊನ್ನುಡಿಗಳು, ಮುನ್ನುಡಿ, ಬೆನ್ನುಡಿ, ಸಹಜ ಪುಸ್ತಕ ವಿಮರ್ಶೆ, ಎಲ್ಲದರಲ್ಲೂ ಮೌಲಿಕ ಬರಹ.

ಡಾ. ಸಿದ್ಧರಾಮ ಹೊನ್ಕಲ್ ಅವರು ಬಹಳ ಪ್ರೀತಿ ವಿಶ್ವಾಸದಿಂದ ತಮ್ಮ ಸಮಗ್ರ ಗಜಲ್ ಸಂಕಲನ " ನಿನ್ನ ಜೊತೆ ಜೊತೆಯಲಿ" ನನ್ನ ಕೈಗಿತ್ತರು. ಸುಮಾರು 495 ಪುಟಗಳ 500 ರೂ. ಮುಖಬೆಲೆಯ 319  ಶ್ರೇಷ್ಠ ಗಜಲಗಳ ಹೊತ್ತಿಗೆಯಿದು. ಮಲ್ಲಿಗೆದಂಡೆ ಮುಡಿದ ಲಲನೆಯ ಮುಖಪುಟ ನೋಡಿದ ಕ್ಷಣವೇ ಮನ ಮುದಗೊಳ್ಳುವುದು. ಪ್ರತಿ ಸುಂದರ ಗಜಲಿಗೊಂದು ಅಂದವಾಗಿ ಒಳಚಿತ್ರ  ರಚಿಸಿದ  ಕಲಾವಿದರಾದ ಪುಂಡಲಿಕ್ , ಹಾದಿಮನಿ, ಅರುಣಕುಮಾರ್ ಅವರುಗಳಿಗೆ ಅಭಿನಂದನೆ ಹೇಳಲೇಬೇಕು.

ಈ ಕೃತಿ ಕೊಟ್ಟು ಬಹಳ ದಿನಗಳೇ ಆದವು. ಆದರೆ  ಕಾರ್ಯ ಒತ್ತಡದಿಂದ ಓದಿ ಬರೆಯುವುದು ಆಗಿರಲಿಲ್ಲ. ಒಂದು ಸಾರಿ ಕೈಗೆತ್ತಿಕೊಂಡರೆ ಓದಿ ಮುಗಿಸದೆ ಕೆಳಗಿಡುವಂತಿಲ್ಲ ಹಾಗಿದೆ.

 "ಹೊನ್ನಸಿರಿ" ಎಂಬುದು ವಿಶೇಷ ಮತ್ತು ಸುಂದರ ಕಾವ್ಯನಾಮ. ಗಜಲ್  ರಚನಾ ನಿಯಮಗಳ ಸ್ಥೂಲ ವಿವರಣೆ,  ಉದಾಹರಣೆ ಸಮೇತ ನೀಡುವ ಮೂಲಕ ಗಜಲ್ ನ ಉದಯೋನ್ಮುಖರಿಗೆ  ಪ್ರೋತ್ಸಾಹ ನೀಡಿದ್ದಾರೆ. ಅದರ ಬಳಕೆಗೂ ಅನುಮತಿ ನೀಡಿದ ದೊಡ್ಡತನ ಅವರದು. 

 "ಹುಚ್ಚು ಹೊಳೆಯಾಗಿ ಬಂದವಳ              ಬರಸೆಳೆದ ಹೊನ್ನಸಿರಿ ಮನದಣಿಯೇ ಮುದ್ದಾಡಿ ಕಥೆಯಾಗಿಸಿ ಕಾಯುತ್ತೇನೆ"
ಗಜಲವೊಂದರ ಈ ಮಿಶ್ರಾ ಓದಿದಾಗ ಕಾವ್ಯ ಕನ್ನಿಕೆಯೊಡನೆ  ಹೊನ್ನಸಿರಿಯ ಪ್ರೇಮಾಲಾಪದ ಚಿಕ್ಕ ಝಲಕ್  ಕಣ್ಣಿಗೆ ಕಟ್ಟುತ್ತದೆ . ಇಲ್ಲಿಯ ಬಹಳಷ್ಟು ಗಜಲಗಳು ನಿರ್ಮಲವಾದ ಜುಳುಜುಳು ಮಂಜುಳ ನಿನಾದದಿ ಹರಿಯುವ ನದಿಯಂತೆ ಭಾಸವಾಗುತ್ತವೆ. 
  
" ಜಂಜಡದ ಬದುಕಿನಲಿ ಯಾರು ಕೈ ಹಿಡಿಯದಿರಬಹುದು
ಸೋತೆನೆಂದು ಎಂದೆಂದಿಗೂ ನೀ ಹಿಜರಿಯಬೇಡ ಗೆಳೆಯ"
ಬೇರೆಯವರ ಮೆಚ್ಚುಗೆಗೆ ಕಾಯದೇ ಮುನ್ನುಗ್ಗು , ಅವ್ಯಕ್ತ ವಿಚಾರಗಳ ಭ್ರಮಾನಿರಸನ ತೊರೆದು ಭರವಸೆಯ ತೊರೆಯ ಹರಿವನ್ನು ಕಾಣಬಹುದು. 

" ಕತ್ತಲೆ ಕಳೆದು ಬೆಳಕು ಮೂಡಿಸಿದವರೆ ಸಂತ ಸೂಫಿಗಳು ಬಸವಾದಿ ಶರಣರು" ಇದೊಂದು ಅದ್ಭುತ ಆಧ್ಯಾತ್ಮಿಕ ನೆಲೆಯ ಭಾವವನ್ನು ಹೊರಸೂಸುತ್ತದೆ. ಆ ಸಾಂಸ್ಕೃತಿಕ ನೆಲೆಯನ್ನು ಅವರು ಅಪ್ಪಿಕೊಂಡಿರುವ ರೀತಿ ಅನನ್ಯ. "ಲಿಂಗ ಪತಿ ಶರಣ ಸತಿ" ಎಂಬ ಔನ್ನತ್ಯ ಭಾವವಿದು.

"ನೆಡೆದಷ್ಟೆ ದಾರಿ ಪಡೆದಷ್ಟೆ ಫಲ ಜಗದ ರಂಗಮಂದಿರದಿ, 
ಹೊನ್ನಸಿರಿ ಬೇಸರಿಸದಿರು ಈ ಭವಕೆ ಬಂದಿರಲು"
ಮುಕ್ತಾಯಕ್ಕನವರ ಸಾನಿಮಿಶ್ರಾ ಪಡೆದು ರಚಿಸಿದ ತರಹಿ ಗಜಲಿನ ಈ ಶೇರ್ ಅತ್ಯಂತ ಮಾರ್ಮಿಕವಾಗಿದೆ. ಕಾಯಕ ನಿನ್ನ ಕೆಲಸ ಅದರ ಫಲಾಫಲ ಕರ್ತನಿಗೆ ಬಿಡು ಎಂಬ ಉದಾತ್ತ ಭಾವ ಬಿಂಬಿತವಾಗಿದೆ.

"ಹೆಜ್ಹೆ ಇಡಲು ಬಾರದವಗೆ ಗೆಜ್ಹೆ ಕಟ್ಟಿ ನೆಡೆಸಿದರಿಗೆ ನಮಸ್ಕಾರ
ಅದ್ಭುತ ಗಜಲ್ಕಾರ ಇರುವನೆಂದು ಬೆನ್ನು ತಟ್ಟಿದವರಿಗೆ ನಮಸ್ಕಾರ"
ಎನಗಿಂತ ಕಿರಿಯರಿಲ್ಲೆಂಬ ವಿನಯವಂತಿಕೆ ಹಾಗೂ ತನ್ನನ್ನು ಪ್ರೋತ್ಸಾಹಿಸಿದವರಿಗೆ ಧನ್ಯವಾದ ಹೇಳುವ ಈ ಸಾಲುಗಳು ಅನನ್ಯ.

"ಮುಖವಾಡಗಳ ಬದುಕಿನಲಿ ಪ್ರೀತಿ ವಿಶ್ವಾಸ ನಂಬಿಕೆಯ ಕೊರತೆ ಎದ್ದು ಕಾಣುವುದು
ಹೊನ್ನಸಿರಿ ಕಲ್ಲು ದೇವರ ಹುಡುಕದೆ ಆತ್ಮಸಾಕ್ಷಿಗೆ ಜವಾಬಾಗಿ ಬದುಕಿರುವೆ"
ಇವತ್ತಿನ ಅರಾಜಕತೆಯಲ್ಲಿ ಮುಳುಗಿರುವ ಸಮಾಜದಲ್ಲಿಯ ಕುಂದು ಕೊರತೆಗಳಿಗೆ ಮರುಗದೆ ಆತ್ಮಸಾಕ್ಷಿಗೆ ಅನುವಾಗಿ ಬದುಕು ಎಂಬ ಆಶಯವನ್ನು ಈ ಗಜಲ್ ಸೂಚಿಸುತ್ತದೆ.

"ಪ್ರೀತಿ ಎಂಬುದೊಂದು ವಿಷವೆಂದು ಈ ಜಗವೇ ಅನ್ನತೈತಿ ಸಖಿ
ಮಧುವಲ್ಲಿಯ ವಿಷ ನಿನ್ನಧರಗಳಲಿ ಬೆರೆತು ಅಮೃತವಾಗೈತಿ ಸಖಿ" 
                 ಮತ್ತು
"ಕನಸುಗಣ್ಣಿನ ಹುಡುಗಿ ಕನಸುಗಳ
 ಮಾರುತ್ತ ಹೊರಟವಳೆ ಬಾ ಕಾದಿರುವೆ
ನಗುವ ಹೂವುಗಳ ಮುಂಗುರುಳ ಮುದ್ದಿಸುತ್ತ ಬರುವ ನೀ ಹೂಬನದಲಿ ಬಾ ಕಾದಿರುವೆ"

ಈ ಎರಡು ಶೇರ್ ಗಳನ್ನು ಅವಗಾನಿಸಿದಾಗ
ಅವರ ರಸಿಕತೆ, ಕಾವ್ಯ ರಸಸ್ವಾದದ ಗುಣ ಗ್ರಾಹಕತೆ ಅರಿವಿಗೆ ಬರುತ್ತದೆ.

ಹೀಗೆ ಒಂದೊಂದು ಗಜಲನ್ನು ಓದಿದಾಗ ಒಂದೊದು ಭಾವ ಉತ್ಪನ್ನವಾಗುತ್ತವೆ. ಬರೆಯುತ್ತ ಹೋದರೆ ಎಷ್ಟು ಬರೆದರೂ ಮುಗಿಯದ ಸಾಹಿತ್ಯ ನಿಧಿ ಈ ಹೊತ್ತಿಗೆ.

 ಒಟ್ಟಿನಲ್ಲಿ ಈ ಎಲ್ಲಾ ಗಜಲ್ ಗಳಲ್ಲಿ ಪ್ರೇಮ, ಪ್ರಣಯಗಳ ತಲ್ಲಣ, ವಿರಹ ವೇದನೆ, ತೀರದ ಬಯಕೆ, ಹುಚ್ಚು ಕನಸುಗಳು, ಸ್ನೇಹ- ಸಂಬಂಧ, ಮೃದುಲತೆ, ದಾಂಪತ್ಯ, ಸೌಂದರ್ಯ, ನೋವು-ನಲಿವು, ಸುಖ,-ದುಃಖ, ಭರವಸೆ, ಮೌನ-ಧ್ಯಾನ, ಏಕಾಂಗಿತನ , ಶಾಂತಿ-ನೆಮ್ಮದಿ, ಜನನ-ಮರಣ,  ಮುನ್ನುಗ್ಗುವಿಕೆ, ಭಾಷೆಯ ಸೊಗಡು , ಕಾವ್ಯದ ಚೆಲುವು, ಪರಿಸರ   ರಕ್ಷಣೆ, ಸಾತ್ವಿಕ ಕೋಪ, ಬಡತನದ ಬೇಗೆ, ಜಾತೀಯತೆಯ ವ್ಯಂಗ್ಯ, ರಾಜಕೀಯ ವಿಡಂಬನೆ, ಸಾಮಾಜಿಕ ಮೂಢನಂಬಿಕೆ, ಧರ್ಮ ಕಲಹ, ಅನಕ್ಷರತೆಯ ಕುತ್ತು, ಸ್ವಾರ್ಥ-ಹೊಟ್ಟೆಕಿಚ್ಚಿನ ಹಾರಾಟ, ಬದುಕಾಗಿ ರೈತನ ಹೋರಾಟ, ಅಧ್ಯಾತ್ಮಿಕ ಅನುಭಾವ, ಮುಂತಾದ ಬದುಕಿನ ಎಲ್ಲಾ ಆಯಾಮಗಳನ್ನು ಕಾಣಲು ಸಾಧ್ಯ.
   
 ನಿಜವಾಗಿಯೂ ಇಂತಹ ಹಿರಿಯ ಸಾಹಿತಿಗಳ ಒಡನಾಟ ನಮಗೆ ದೊರಕಿರುವುದು ಹೆಮ್ಮೆಯ ವಿಷಯವೇ ಸರಿ. ಮುಂದಿನ ಅವರ ಕೃತಿಗಳಿಗೆ ಇನ್ನೂ ಉನ್ನತಮಟ್ಟದ ಪ್ರಶಸ್ತಿ ಪುರಸ್ಕಾರ ದೊರಕಲೆಂದು ಆಶಿಸುತ್ತ ಅವರಿಗೆ ಮತ್ತೊಮ್ಮೆ ಅಭಿನಂದನೆ ತಿಳಿಸುವೆ.

- ಶ್ರೀಮತಿ ವಿಜಯಲಕ್ಷ್ಮಿ ಕೊಟಗಿ
"ಸ್ನೇಹಶ್ಪರ್ಷ" ರಾಜಾಜಿ ನಗರ
ಮುಖ್ಯರಸ್ತೆ, ಕೊಪ್ಪಳ.
ಮೊ : 9632240787

      

 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize