Advt. 
 Views   1566
Oct 19 2023 2:51PM

ಕವನ : ಅಳಲಾರದ ಮಕ್ಕಳು....


ಕೊಪ್ಪಳದ ಸಾಹಿತಿ ಅನಸೂಯಾ ಜಹಗೀರದಾರ ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಮಹಿಳಾ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು. ಮೈಸೂರು ಮಾನಸ ಗಂಗೋತ್ರಿಯ ರಾಣಿಬಹದ್ದೂರ ಸಭಾಗಣದಲ್ಲಿ ಅಕ್ಟೋಬರ್ 18 ರಂದು ಮಹಿಳಾ ಕವಿಗೋಷ್ಠಿ ಜರುಗಿತು.

ಕವಿಗೋಷ್ಠಿ ಅಧ್ಯಕ್ಷತೆ ಖ್ಯಾತ ಕವಯತ್ರಿ ಸವಿತಾ ನಾಗಭೂಷಣ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಚಿತ್ಕಳಾ ಬಿರಾದಾರ್ ಆಗಮಿಸಿದ್ದರು. ಕವಿಗೋಷ್ಠಿಯ ಆಶಯ ಭಾಷಣ ಮಾಡಿದ ಹಿರಿಯ ಕವಿ ಸತೀಶ ಕುಲಕರ್ಣಿಯವರು ಕಾವ್ಯದ ಹೊಸ ಪರಂಪೆರೆ ಕುರಿತು ಮಾತನಾಡಿ ನಾಡಿನ ಕವಯತ್ರಿಯರಲ್ಲಿ  ಮಮತಾ ಅರಸೀಕೆರೆ, ರೇಣುಕಾ ರಮಾನಂದ, ಅನಸೂಯ ಜಹಗೀರದಾರ ಸೇರಿದಂತೆ ಅನೇಕರು ತಮ್ಮ ಛಾಪು ಮೂಡಿಸಿದ್ದಾರೆ ಎಂದರು. 

------------------

ಕವಿತೆ
                 ಅಳಲಾರದ ಮಕ್ಕಳು

ಕಟ್ಟಡ ಕಟ್ಟುವಲ್ಲಿ
ದುಡಿಯಿವ ಹೆಣ್ಣಾಳು 
ಅಲ್ಲೇ ಇದ್ದ ತಂತಿ ಬೇಲಿಯ ಆಚೀಚೆ 
ಸೀರೆಯ ತೊಟ್ಟಿಲಲ್ಲಿ
ತನ್ನ ಕೂಸಿಗೆ 
ಎದೆಹಾಲ ಕುಡಿಸಿ.. 
ಮತ್ತೇ ತೊಟ್ಟಿಲಲಿ ಇರಿಸಿ..
ಒಂದೆರಡು ಬಾರಿ ತೂಗಿ
ಕೈ ಝಾಡಿಸಿ 
ನಡೆಯುತ್ತಾಳೆ ಕೆಲಸಕ್ಕೆ..
ಉಸ್ತುವಾರಿಯವ 
ನಾಲಕ್ಕು ಬಾರಿ ಕರೆದಾಗಿದೆ
ತಡಮಾಡುವುದು ಒಳಿತಲ್ಲ.

ಎಚ್ಚರಗೊಂಡ ಆ ಮಗು 
ತಂತಿ ಮೇಲೆ ಹರಿದಾಡುವ 
ಇರುವೆಗಳ 
ಕಂಡು ನಗುತ್ತದೆ..ಅಲ್ಲೇ...
ಅಳುವುದಿಲ್ಲ..!

ಜೋಳ ಸಜ್ಜೆ ಹೊಲದಲಿ 
ತೆನೆ ಮುರಿಯುವ ಕಾಲದಲಿ
ಹೆಂಗಳೆಯೊಬ್ಬಳು
ಮರಕ್ಕೊಂದು ಹಗ್ಗ ಬಿಗಿದು 
ಕಾಟನ್ ಹಳೆಯ ಬಾಂಡಿನ 
ಸೀರೆಯೊಂದನ್ನು
ಹಗ್ಗದಲಿರಿಸಿ ತೊಟ್ಟಿಲಾಗಿಸಿ
ಮಗುವ ಮಲಗಿಸಿ
ತನ್ನ ಕಾಯಕದಲಿ ನಿರತಳಾಗುತ್ತಾಳೆ..
"ಭೂಮಿ ತಾಯಿ ಕಾಯಮ್ಮ ಈ ಮಗುವ"
ಅನ್ನುತ್ತಾಳೆ.

ಆಕಳಿಸುವ ಕಂದಮ್ಮ 
ಗಿಡದ ಮೇಲಿನ ಹಕ್ಕಿ ಕಲರವ ಕೇಳಿ
ರೆಕ್ಕೆ ಗರಿ ಪುಕ್ಕವ ನೋಡಿ 
ನಗುತ್ತದೆ.
ಕಾಲು ಬಡಿದು ಅಳುವುದಿಲ್ಲ.

ಉಡಿಯಲಿ ಮಗುವ ಕಟ್ಟಿ
ದಿನದ ದಗದಕ್ಕೆ ಇಳಿದ 
ಪೊರಕೆ ಮಾರುವಾಕೆ
ಹಣ್ಣು ತರಕಾರಿ ಮಾರುವಾಕೆ
ಬೀದಿ ಬೀದಿಯಲಿ
ಓಣಿ ಓಣಿಯಲಿ
ಅಲೆಯುತ್ತಾರೆ
ಕಾಂಗರೂವಿನಂತೆ
ಮಡಿಲ ಚೀಲದ ಮಗು 
ಹಸಿವಾದಾಗ ಬೆರಳು ಚೀಪುತ್ತದೆ
ಅವಳ ಗದರಿಕೆಗೆ ಸುಮ್ಮನಾಗುತ್ತದೆ
ಅಳುವುದಿಲ್ಲ.

ಬಟ್ಟೆಗೆ ಮತ್ತು ಬ್ಯಾಗುಗಳಿಗೆ
ಜಿಪ್ಪು ಹಾಕಿ ಹೊಲಿವಾಕೆ
ಪ್ಲಾಸ್ಟಿಕ್ ಕೊಡಪಾನ ಬಕೆಟ್ಟು ಹಿಡಿದಾಕೆ
ಕೊಂಕುಳಿನ ಚೀಲದಲಿ ಮಗುವ ಕಟ್ಟಿಕೊಂಡು
ಉದರ ಪೋಷಣೆಗೆ ಅಲೆಯುತ್ತಾರೆ
ಮಗು ಬೇಗೆಗೆ ನರಳಿ 
ನಿದ್ದೆ ಹೋಗಿರುತ್ತದೆ ಅಲ್ಲೇ
ಅಳುವುದಿಲ್ಲ.

ಬಟ್ಟೆ ಇಸ್ತ್ರಿ ತೀಡುವಾಕೆ..
ಕಸ್ಟಮರ್ ಗಳಿಗೆ ಸಮಾಧಾನಿಸುವ 
ಮಹಿಳಾ ದರ್ಜಿಯಾಕೆ
ಟೇಬಲ್ ಕಾಲಿನ 
ತೊಟ್ಟಿಲಿನ ಮಗುವ
ಹಾಗೇ ತೂಗಿಕೊಳ್ಳುತ್ತಾರೆ
ಕಣ್ಣು ಬಿಟ್ಟಾಗ ಮೊಬೈಲು
ಹಾಡು ಗುಣುಗುಣಿಸುತ್ತಾರೆ
ನಗುತ್ತದೆ ಮಗು
ಅಳುವುದಿಲ್ಲ.

ಕ್ಯಾಂಟೀನುಗಳಲಿ 
ಮುಸುರೆ ಪಾತ್ರೆ ತೊಳೆಯುವ;
ಕೇಟಿ ಮಂಡಕ್ಕಿ ಮಿರ್ಚಿ ಭಜಿ
ಕೊಡುವಾಕೆಯ ಮಕ್ಕಳು
ಪಾವಟಿಗೆಯ ಕಲ್ಲು ಹಾಸಿನ ಮೇಲೆ
ಮಲಗಿರುತ್ತಾರೆ ಅಲ್ಲೇ
ಅಳುವುದಿಲ್ಲ.

ಅಪ್ಪ ಅಮ್ಮ ದುಡಿಯ ಹೋದಾಗ 
ಸಣ್ಣ ಕಂದಮ್ಮಗಳ ಉಸ್ತುವಾರಿವಹಿಸುವ
ತುಸು ದೊಡ್ಡ ಮಕ್ಕಳು..

ಹೋಟೆಲ್ ಗಳಲಿ ತಾಯ
ಬದಿನಿಂತು ಗಲ್ಲಾಪೆಟ್ಟಿಗೆ
ನಿಭಾಯಿಸುವ ಮಕ್ಕಳು...
ಕೆಲಸ ಕಲಿಯುತ್ತ ನಗುತ್ತವೆ...!
ಅಳುವುದಿಲ್ಲ..!

ಅಳಲಾರದ...ಅಳಲಾಗದ..
ಅಳಬಾರದ.. ಮಕ್ಕಳಿವು...!
ಅವುಗಳಿಗೆ ಗೊತ್ತಿದೆ
ಅತ್ತರಿಲ್ಲಿ ನಡೆಯುವುದಿಲ್ಲ
ತುತ್ತಿನ ಚೀಲ ತುಂಬುವುದಿಲ್ಲ.

ಈ ದುನಿಯಾದ ತುಂಬಾ
ಅಳದ ಮಕ್ಕಳಿವೆ
ಏಕೆಂದರೆ 
ಜಗತ್ತು ತುಂಬಾ ಬಡವಾಗಿದೆ
ಕಣ್ಣೀರಿಗೂ ಅಲ್ಲಿ ಬರವಿದೆ..!

- ಅನಸೂಯ ಜಹಗೀರದಾರ ಕೊಪ್ಪಳ



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize