ಕೊಪ್ಪಳ ಜಿಲ್ಲೆಯಾಗಬೇಕು
ಕಿಲ್ಲೆಮ್ಯಾಲೆ ಝಂಡಾ ಹಾರಬೇಕು.
ಕವಿರನ್ನ ಹಾಡಿದಂತ ಬೆಟ್ಟಸಾಲು
ಇಂದ್ರಕೀಲ ಇರುವುದಿಲ್ಲಿ
ಜೈನ ಮುನಿಪುಂಗವರು
ತಪಗೈದ ನಾಡಿದು.
ಮೌರ್ಯದರಸು ಶೌರ್ಯದರಸು
ಹಾದು ಹೋದ ನಾಡಿದು
ಸ್ವಾತಂತ್ರ್ಯಕ್ಕಾಗಿ ಮಾಡಿ
ಮಡಿದ ವೀರರ ನೆಲೆವೀಡು.
ಅಶೋಕ ಶೋಕ ಶಾಸನಗಳು
ಸಾರುತಿವೆ ಹಿಂಸೆ ಬೇಡವೆಂದು
ಬುದ್ಧ ಸಂದೇಶ ಹೊತ್ತ ಪ್ರಬುದ್ಧರ
ಸಿದ್ಧ ಪುರುಷರ ನಾಡಿದು.
ಕೊಪ್ಪಳ ಜಿಲ್ಲೆಯಾಗಬೇಕು
ಕಿಲ್ಲೆಮ್ಯಾಲೆ ಝಂಡಾ ಹಾರಬೇಕು
ಕವಿ ಚಕ್ರವರ್ತಿ ನೃಪತುಂಗ
ಸಾರಿದ ತಿರುಳ್ ಗನ್ನಡ ಸೀಮೆ
ಕನ್ನಡದ ಕರುಳೆಂದು
ನಾಡಿನೊಳು ಇದಕ್ಕೆ ದೊಡ್ಡ ಹಿರಿಮೆ.
ಕನ್ನಡಕ್ಕೆ ಕುತ್ತು ಬಂದಾಗ
ಕೈ ಎತ್ತಿದ ಈ ಊರು
ಆಗಾಗ ಎಳದೈತೆ ಕನ್ನಡದ ತೇರು
ಜಿಲ್ಲೆಗಾಗಿ ಮಾಡೈತೆ ಜೋರು.