ಕೊಪ್ಪಳ : ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಜಿಲ್ಲಾ ಕೇಂದ್ರದ 5-6 ಕಿ.ಮೀ ವ್ಯಾಪ್ತಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಆಗ್ರಹಿಸಿ ಅ.16 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕರು ಹಮ್ಮಿಗೇಶ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಕೊಪ್ಪಳ ವಿವಿ ಅರಂಭವಾಗಿ ಮೂರು ವರ್ಷ ಕಳೆದರೂ ಸ್ವಂತ ಕಟ್ಟಡ ಆಗದೆ ಇರುವುದು ಖಂಡನೀಯ.
ವಿವಿ ಅಂದ್ರೆ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜ್ಞಾನಕೇಂದ್ರ. ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಅಗತ್ಯ ತರಗತಿ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ, ಸಂಶೋಧನಾ ಕೇಂದ್ರ, ವಿದ್ಯಾರ್ಥಿಗಳಿಗೆ ವಸತಿ ನಿಲಯ ಅವಶ್ಯವಿದೆ.
ಸ್ವಂತ ಕಟ್ಟಡ ಇಲ್ಲದೆ ವಿವಿ ನಡೆಸುವುದು ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದಂತೆ. ಕೂಡಲೇ ಜಿಲ್ಲಾಡಳಿತವು ಸರಕಾರಕ್ಕೆ ಸ್ಪಷ್ಟವಾದ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಮತ್ತು ಅನುದಾನ ಪಡೆಯಬೇಕು.
ಅ.16 ರಂದು ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನವರೆಗೆ ಸಾವಿರಾರು ವಿದ್ಯಾರ್ಥಿಗಳು ಪಾದಯಾತ್ರೆ ಬರಲಿದ್ದಾರೆ. ಅಲ್ಲಿಗೆ ಶಾಸಕರು ಬಂದು ನಮ್ಮ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವ ಕಾಲಮೀತಿಯ ಭರವಸೆ ಕೊಡಬೇಕು.
ಉನ್ನತ ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ವಿವಿಗೆ ಸ್ವಂತ ಕಟ್ಟಡ ಇಲ್ಲದ್ದು ವಿಷಾದನೀಯ. ನಮ್ಮ ಹೋರಾಟದ 10 ದಿನದಲ್ಲಿ ನಿವೇಶನ ಗುರುತಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಡಳಿತ ಭವನ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸುತ್ತೇವೆ ಎಂದು ಹಮ್ಮಿಗೇಶ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉತ್ತರ ಪ್ರಾಂತ್ಯ ರಾಜ್ಯ ಸಹಕಾರ್ಯದರ್ಶಿ ಸುಮಂಗಲಾ, ನಗರ ಕಾರ್ಯದರ್ಶಿ ಆದಿತ್ಯ ಹವಳೆ, ಜಯಶ್ರೀ ಉಪಸ್ಥಿತರಿದ್ದರು.