20 ವರ್ಷಗಳ ಹಿಂದೆ ರಾಜಕಾರಣದ ಅವಕಾಶ ಹುಡುಕಿಕೊಂಡು ಬಂದರೂ ಶಿಕ್ಷಕ ವೃತ್ತಿಗೆ ಆದ್ಯತೆ : ಈಗ ಜಿ.ಪಂ ಚುನಾವಣೆಗೆ ಸ್ಪರ್ಧಿಸುವರೆ ಎಂಬ ಕುತೂಹಲ
ಕೊಪ್ಪಳ : ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷರು, ಹಲಗೇರಿಯ ಶಂಭುಲಿಂಗನಗೌಡರು ಇಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಎಲ್ಲ ಅಂದುಕೊಂಡಿದ್ದೆ ಆಗಿದ್ದರೆ ಈಗ್ಗೆ 20 ವರ್ಷಗಳ ಹಿಂದೆಯೇ ಶಂಭುಲಿಂಗನಗೌಡರು ರಾಜಕೀಯಕ್ಕೆ ಬಂದು ಇಷ್ಟೊತ್ತಿಗೆ ಹಿರಿಯ ರಾಜಕಾರಣಿ ಆಗಿರಬೇಕಿತ್ತು.
2004 ರಿಂದ 2006 ವರೆಗೆ ಅವರಿಗೆ ರಾಜಕೀಯ ಪಕ್ಷ ಸೇರುವ ಆಹ್ವಾನ ಮತ್ತು ಅವಕಾಶ ಹುಡುಕಿಕೊಂಡು ಬಂದಿತ್ತು.
ಆದರೆ ಗೌಡರು ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯಲು ತೀರ್ಮಾನಿಸಿದರು. ಸಕ್ರೀಯ ರಾಜಕಾರಣದ ಚುನಾವಣೆ ಬದಲು ನೌಕರರ ಸಂಘ, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಚುನಾವಣೆ ಎದುರಿಸುತ್ತ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರ ಸ್ಥಾನ ಪಡೆದರು.
ಇತ್ತೀಚೆಗೆ ಮುಖ್ಯೋಪಾಧ್ಯಾಯರಾಗಿ ನಿವೃತ್ತಿಯಾದ ಶಂಭುಲಿಂಗನಗೌಡರಿಗೆ ಬೆಂಬಲಿಗರು ಅಭಿಮಾನಿಗಳು ಜುಲೈ ತಿಂಗಳು ಮಧುಶ್ರೀ ಗಾರ್ಡನ್ ನಲ್ಲಿ ಅದ್ದೂರಿಯಾಗಿ ಅಭಿನಂದನಾ ಸಮಾರಂಭ ಏರ್ಪಡಿಸಿದಾಗ ಗೌಡರು ರಾಜಕೀಯ ಕ್ಕೆ ಬರ್ತಾರಾ ? ಎಂಬ ಚರ್ಚೆ ಶುರುವಾಯ್ತು.
ಆವತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು ಸಿ.ವಿ.ಚಂದ್ರಶೇಖರ, ಬಿಜೆಪಿಯ ಎಂಎಲ್ಸಿ ಹೇಮಲತಾ ನಾಯಕ ಅವರು ನಮ್ಮ ಪಕ್ಷಕ್ಕೆ ಬರ್ರಿ ಅಂತ ಗೌಡರಿಗೆ ಬಹಿರಂಗ ಆಹ್ವಾನ ನೀಡಿದ್ರು. ಆವತ್ತು ಗೌಡರು ಯಾವ ನಿರ್ಧಾರವೂ ಪ್ರಕಟಿಸಲಿಲ್ಲ.
ಇವತ್ತು ಗೌಡರು ರಾಜಕೀಯಕ್ಕೆ ಬಂದು ಬಿಜೆಪಿ ಸೇರಿದ್ದಾರೆ. ಜಿ.ಪಂ, ತಾ.ಪಂ ಚುನಾವಣೆಯ ಕ್ಷೇತ್ರವಾರು ಮೀಸಲು ಘೋಷಣೆ ಆದಾಗಲೆ ಗೌಡ್ರು ಬಿಜೆಪಿ ಸೇರಿದ್ದು ಅವರು ಜಿ.ಪಂ ಗೆ ಸ್ಪರ್ಧಿಸ್ತಾರಾ ? ಸ್ಪರ್ಧಿಸಿದರೆ ಯಾವ ಕ್ಷೇತ್ರ ?
ಜಿ.ಪಂ.ಗೆ ಸ್ಪರ್ಧೆ ಎಂದರೆ ಗೌಡರ ಹಲಗೇರಿ ಗ್ರಾಮ ಲೇಬಗೇರಿ ಜಿ.ಪಂ ಗೆ ಒಳಪಟ್ಟಿದ್ದು ಅಲ್ಲಿ ಎಸ್.ಟಿ. ಮೀಸಲು ಇದೆ. ಹಾಗಾಗಿ ಸಾಮಾನ್ಯ ಕ್ಷೇತ್ರವಾಗಿರುವ ಹಿರೇಸಿಂದೋಗಿಯಿಂದ ಸ್ಪರ್ಧಿಸಬಹುದು ಎಂಬ ಮಾತು ಕೇಳಿ ಬರುತ್ತಿದೆ.
60 ಎಂಬ ವಯಸ್ಸು ಬಹುಪಾಲು ರಾಜಕಾರಣಿಗಳ ರಾಜಕೀಯ ಬದುಕು ಇಳಿಮುಖದತ್ತ ಸಾಗಲು ಆರಂಭವಾಗುವ ಸಮಯ. ಆದರೆ ಗೌಡರು 60 ಕ್ಕೆ ರಾಜಕೀಯ ಸೇರಿ ಹೊಸ ಇನ್ನಿಂಗ್ಸ್ ಗೆ ರೆಡಿಯಾಗಿರುವುದು ವಿಶೇಷ.