ಕೊಪ್ಪಳ : ಇತ್ತೀಚಿಗೆ ನಿಧನರಾದ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಗಂಗಾಧರ ಸ್ವಾಮಿ ಅವರಿಗೆ ನುಡಿನಮನ ಕಾರ್ಯಕ್ರಮ ಶುಕ್ರವಾರ ಜರುಗಿತು.
ಶಕ್ತಿಶಾರದೆಯ ಮೇಳ ಹಾಗೂ ವಿಜಯೋತ್ಸವ ರಂಗ ಚಿಂತನ (ವಿರಂಚಿ) ಕಲಾತಂಡ ಜಂಟಿಯಾಗಿ ಭಾಗ್ಯನಗರ ರಸ್ತೆಯ ಅವ್ವ ನಿಲಯದಲ್ಲಿ ನುಡಿ ನಮನ ಆಯೋಜಿಸಿದ್ದವು.
ಈ ಸಂದರ್ಭದಲ್ಲಿ ಸಾಹಿತಿ, ನಾಟಕ ಕಲಾವಿದರಾದ ಈಶ್ವರ ಹತ್ತಿ ಮಾತನಾಡಿ ರಂಗ ಜಂಗಮ ಎಂದು ಖ್ಯಾತಿ ಹೊಂದಿದ್ದ ಗಂಗಾಧರ ಸ್ವಾಮಿಯವರು ರಂಗಾಯಣ ನಿರ್ದೇಶಕರಾಗಿ ರಂಗಭೂಮಿ ಕಲೆ ರಾಜ್ಯಾದ್ಯಂತ ಪಸರಿಸಿದರು. ಈ ನಿಟ್ಟಿನಲ್ಲಿ ಕನ್ನಡ ರಂಗಭೂಮಿಗೆ ಅವರ ಕೊಡುಗೆ ಅಪಾರ.
ಶ್ರೀ ಗವಿಮಠ ಐತಿಹ್ಯ ಕತೆಯ ನಾನು ರಚಿಸಿದ 'ಅಟ್ಟಣಿಕೆಗಳು ಹದಿನೆಂಟು' ನಾಟಕವನ್ನು ರಂಗಕ್ಕೆ ಅಳವಡಿಸಿ ನಿರ್ದೇಶನ ಮಾಡಿ 2010 ರಲ್ಲಿ ಮೊದಲ ಪ್ರದರ್ಶನಕ್ಕೆ ಕಾರಣಿಭೂತರು ಗಂಗಾಧರ ಸ್ವಾಮಿಯವರು ಎಂದ ಅವರು ನಾಟಕ ಪ್ರದರ್ಶನದ ನೆನಪುಗಳನ್ನು ಮೆಲುಕು ಹಾಕಿದರು.
ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ಮಹಾಂತೇಶ ಕೊತಬಾಳ ವಹಿಸಿದ್ದರು. ಅತಿಥಿಗಳಾಗಿ ಶಿಕ್ಷಕಿ ವಿಜಯ ಲಕ್ಷ್ಮಿ ಕೊಟಗಿ ಆಗಮಿಸಿದ್ದರು. ವಿರೇಶ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.
ಸಾಹಿತಿಗಳಾದ ಮಾಲಾ ಬಡಿಗೇರ, ಅರುಣಾ ನರೇಂದ್ರ, ಬಸನಗೌಡ ಹಲಗೇರಿ, ಹಾಲಯ್ಯ ಹುಡೇಜಾಲಿ, ವಿರೇಶ ಕೊಪ್ಪಳ, ಬಸವಂತರೆಡ್ಡಿ ಬಿ ಆಡೂರ, ಡಿ.ಎಮ್.ಬಡಿಗೇರ, ಶರಣು ಶೆಟ್ಟರ್ ಮುಂತಾದವರು ಉಪಸ್ಥಿತರಿದ್ದರು.