ಕೊಪ್ಪಳ : ಸಚಿವ ಶಿವರಾಜ ತಂಗಡಗಿ ಸವಾಲಿನ ಮಾತು ಆಡುವುದನ್ನು ಬಿಟ್ಟು ತಾಕತ್ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಸವಾಲು ಹಾಕಿದರು.
ಈ ಬಗ್ಗೆ ಜನಾರ್ದನ ರಡ್ಡಿ ಬಳ್ಳಾರಿ ಚಲೋ 5ನೇ ದಿನದ ಪಾದಯಾತ್ರೆ ಅಂಗವಾಗಿ ಮಾತನಾಡಿ ಸಚಿವ ತಂಗಡಗಿ ಹೇಳ್ತಾರೆ ಜನಾರ್ದನ ರೆಡ್ಡಿ ಅವರನ್ನು ಕರೆದುಕೊಂಡು ಪಾದಯಾತ್ರೆ ನಡೆಸುವ ಮೂಲಕ ರಾಜ್ಯದ ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ತಂಗಡಗಿ ಮೊದಲ ಸಲ ಶಾಸಕರಾಗಿ ಗೆಲ್ಲಲು ಜನಾರ್ದನ ರೆಡ್ಡಿ ಹಣ ಕಾರಣವಾಗಿತ್ತು. ತಂಗಡಗಿ ಮಂತ್ರಿಯಾಗಲು ನನ್ನ ಆಶೀರ್ವಾದ ಕಾರಣವಾಗಿತ್ತು. ಇದೀಗ ಅವರಿಗೆ ಕೊಬ್ಬು ಜಾಸ್ತಿಯಾಗಿದೆ ಎಂದು ರೆಡ್ಡಿ ಟೀಕಿಸಿದರು.
ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ತಂಗಡಗಿ ಸವಾಲು ಹಾಕಿದ್ದು ತಂಗಡಗಿ ಗಂಗಾವತಿಯಲ್ಲಿ ಸ್ಪರ್ಧಿಸಿದರೆ ಸೋಲಿಸುತ್ತೇನೆ. ನಾಳೆಯೇ ಚುನಾವಣೆ ನಡೆದರೂ ನಮ್ಮ ಪಕ್ಷದ ಬಸವರಾಜ ದಡೇಸುಗೂರು ಜಯಭೇರಿ ಸಾಧಿಸಲಿದ್ದಾರೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ತಂಗಡಗಿ ಸೊಕ್ಕಿನ ಮಾತುಗಳನ್ನು ಆಡುವುದು ಬೇಡ. ತಾಕತ್ ಇದ್ದರೆ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ. ನಾವು ಚುನಾವಣೆಯಲ್ಲಿ ನಿಂತು ತೋರಿಸುತ್ತೇವೆ. ಅವರಿಗೆ ಠೇವಣಿ ಕೂಡ ಉಳಿಯುವುದಿಲ್ಲ ಎಂದು ಜನಾರ್ದನ ರೆಡ್ಡಿ ತಿರುಗೇಟು ನೀಡಿದರು.