ಕೊಪ್ಪಳ : ಇಂದು ವಿಶ್ವ ರಕ್ತದಾನಿಗಳ ದಿನ.
ಇಂದು ಲಕ್ಷ್ಮಿಕಾಂತ ಗುಡಿ ಎಂಬುವವರು 71ನೇ ಸಲ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
42 ವರ್ಷದ ಲಕ್ಷ್ಮೀಕಾಂತ ಡಿಪ್ಲೋಮಾ ಇನ್ ಆಟೋಮೊಬೈಲ್ ಇಂಜನಿಯರಿಂಗ್ ಪದವಿಧರರು. ಕೊಪ್ಪಳದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹಾಗೂ ಬಾಗಲಕೋಟೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು ಸಧ್ಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ತಮ್ಮ 18ನೇ ವಯಸ್ಸಿನಿಂದ ನಿಯಮಿತವಾಗಿ ವರ್ಷಕ್ಕೆ ನಾಲ್ಕು ಬಾರಿಯಂತೆ ಈವರೆಗೆ 71 ಸಲ ರಕ್ತದಾನ ಮಾಡಿದ್ದಾರೆ.
23 ವರ್ಷಗಳ ಹಿಂದೆ ಆತ್ಮೀಯರೊಬ್ಬರಿಗೆ ರಕ್ತ ಕೊರತೆಯಾದಾಗ ಸಾರಿಗೆ ಸಂಪರ್ಕ ಸರಿಯಾಗಿ ಇಲ್ಲದ ಆ ಕಾಲದಲ್ಲಿ ಹುಬ್ಬಳ್ಳಿಗೆ ಹೋಗಿ ರಕ್ತದಾನ ಮಾಡಿದ ಮೊದಲ ನೆನಪು ಹಂಚಿಕೊಂಡೆರು. ಇವತ್ತು ಜಿಲ್ಲೆಯಲ್ಲಿಯೇ ರಕ್ತ ಭಂಡಾರ ಸ್ಥಾಪನೆಯಾಗಿದೆ. ರಕ್ತ ತೆಗೆದು ರಕ್ತ ಹಾಕುವ ಎಲ್ಲ ಸೌಲಭ್ಯಗಳು ಇವೆ.
ಇಂಥ ಸೌಲಭ್ಯಗಳೇ ಇಲ್ಲದ ಕಾಲದಿಂದ ಅತ್ತ ಹುಬ್ಬಳ್ಳಿ ಇತ್ತ ಬಳ್ಳಾರಿಯಲ್ಲಿ ಮಾತ್ರ ರಕ್ತ ಭಂಡಾರದ ವ್ಯವಸ್ಥೆ ಇದ್ದ ಕಾಲದಿಂದ ರಕ್ತದಾನ ಮಾಡುತ್ತಿದ್ದಾರೆ.
23 ವರ್ಷಗಳ ಹಿಂದೆ ಹಿಮೋಫಿಲಿಯಾದಿಂದ ಬಳಲುತ್ತಿದ್ದ ಅಜ್ಜಿಯೊಬ್ಬರಿಗೆ ನಿಯಮಿತವಾಗಿ 3 ತಿಂಗಳಿಗೊಮ್ಮೆ ರಕ್ತ ಬೇಕಾಗುತ್ತಿತ್ತು. ಆ ಕಾಲದಲ್ಲಿ ಇವರು ಮತ್ತು ಮೂವರು ಸ್ನೇಹಿತರು ಸೇರಿ ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವ ವ್ಯವಸ್ಥೆ ಮಾಡಿಕೊಂಡು ಸಾಮಾಜಿಕ ಕಳಕಳಿ ನಿಭಾಯಿಸಿದ್ದರು.
ರಕ್ತದಾನದ ಬಗ್ಗೆ ಜನರಲ್ಲಿ ಸಾಮಾನ್ಯವಾಗಿ ತಪ್ಪು ತಿಳುವಳಿಕೆ, ಭಯ ಇದ್ದೇ ಇರುತ್ತೆ. ರಕ್ತದಾನ ಮಾಡುವುದರಿಂದ ಯಾವ ತೊಂದರೆಯೂ ಇಲ್ಲ. ನಾನು ರಕ್ತದಾನ ಮಾಡುವುದು ಅವಶ್ಯ ಇದ್ದವರಿಗೆ ಉಪಯೋಗವಾಗಲಿ ಹಾಗೂ ನಾನು ರಕ್ತದಾನ ಮಾಡುವುದು ಇನ್ನೊಬ್ಬರಿಗೆ ಪ್ರೇರಣೆ ಆದರೆ ಸಾಕು ಎಂಬ ಹಂಬಲ ನನ್ನದು ಎಂಬ ವಿನಯವಂತಿಕೆ ಲಕ್ಷ್ಮೀಕಾಂತ ಗುಡಿಯವರದು.
ಎಲ್ಲರೂ ಇವರ ಸಾಮಾಜಿಕ ಕಳಕಳಿಗೆ ಕೃತಜ್ಞತೆ ಹೇಳೋಣ...