ಕೊಪ್ಪಳ : ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಗ್ರಾಮಾಯಣ' ಚಿತ್ರದ ಪ್ರಚಾರ ನಿಮಿತ್ತ ನಾಯಕ ನಟ ವಿನಯ್ ರಾಜ್‌ಕುಮಾರ್, ನಿರ್ದೇಶಕ ಹಾಗೂ ಚಿತ್ರತಂಡ ನಿನ್ನೆ ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳನ್ನು ಭೇಟಿ ಮಾಡಿದರು.
ಚಿತ್ರಮಂದಿರಕ್ಕೆ ಆಗಮಿಸಿದ ವಿನಯ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಜೈಕಾರದೊಂದಿಗೆ ಸ್ವಾಗತಿಸಿ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಗ್ರಾಮಾಯಣ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಗ್ರಾಮಾಯಣ' ಚಿತ್ರಕ್ಕೆ ರಾಜ್ಯದಾದ್ಯಂತ ವ್ಯಕ್ತವಾಗುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಹೇಳಿದರು.
ಉತ್ತಮ ಕಥಾಹಂದರ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ಒಳಗೊಂಡಿರುವ ಈ ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಿಸುವಂತೆ ಮನವಿ ಮಾಡಿದ ಅವರು, ಕನ್ನಡ ಚಿತ್ರರಂಗವನ್ನು ಬೆಂಬಲಿಸಲು ಕನ್ನಡ ಸಿನಿಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ನಂತರ ವಿನಯರಾಜಕುಮಾರ್ ಶ್ರೀ ಗವಿಮಠಕ್ಕೆ ಭೇಟಿ ನೀಡಿ ಶ್ರೀ ಗವಿಸಿದ್ದೇಶ್ವರ ಗದ್ದುಗೆ ದರ್ಶನ ಪಡೆದರು. ಈ ಸಂದರ್ಭ ಶ್ರೀ ಲಕ್ಷ್ಮಿ ಚಿತ್ರಮಂದಿರದ ಮಾಲೀಕರಾದ ವೀರೇಶ್ ಮಹಾಂತಯ್ಯನಮಠ, ವಿಶ್ವನಾಥ್ ಮಹಾಂತಯ್ಯನಮಠ, ಹಿರಿಯ ಸಾಹಿತಿ ಡಾ. ಮಹಾಂತೇಶ್ ಮಲ್ಲನಗೌಡರ, ಶಿವಮೂರ್ತಯ್ಯ ಮಹಾಂತಯ್ಯನಮಠ, ಡಾ. ರಾಜ್‌ಕುಮಾರ್ ಕುಟುಂಬದ ಅಭಿಮಾನಿ ವೆಂಕಟೇಶ್ (ಗಂಗಾವತಿ), ಅಜಯ್, ಬಸವರಾಜ್, ವಿಶ್ವನಾಥ್ ಸ್ವಾಮಿ, ಮಂಜುನಾಥ್, ವ್ಯವಸ್ಥಾಪಕ ಶಿವಾನಂದಯ್ಯ ಉತ್ತಂಗಿಮಠ, ಚಿತ್ರತಂಡದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀ ಲಕ್ಷ್ಮಿ ಚಿತ್ರಮಂದಿರದಲ್ಲಿ ನೆರೆದಿದ್ದ ಅಭಿಮಾನಿಗಳು ವಿನಯ್ ರಾಜ್‌ಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಆಟೋಗ್ರಾಫ್ ಪಡೆದು ಸಂಭ್ರಮಿಸಿದರು.