ಕೊಪ್ಪಳ : ವಕೀಲರ ಕುಟುಂಬಕ್ಕೆ ಗ್ರೂಪ್ ಇನ್ಸೂರೆನ್ಸ್ ಯುವ ವಕೀಲರಿಗೆ ಕಾನೂನು ಕಾರ್ಯಾಗಾರ ಮಹಿಳಾ ವಕೀಲರ ಸಮಸ್ಯೆಗಳಿಗೆ ಸ್ಪಂದನೆ ವಕೀಲರ ಸಂಘದ ಗ್ರಂಥಾಲಯ ಡಿಜೀಟಲೀಕರಣ ಸೇರಿದಂತೆ ವಿವಿಧ ಉದ್ದೇಶಗಳೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹನುಮೇಶ ಮುರಡಿ ಹೇಳಿದರು.
ನಗರದಲ್ಲಿ ಇಂದು ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಮಹಿಳಾ - ಪುರುಷ ವಕೀಲರಿಗೆ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ , ಜಿಲ್ಲಾ ವಕೀಲರ ಸಂಘದಿಂದ ಕೋ ಆಪರೇಟಿವ್ ಸೊಸೈಟಿ ಪ್ರಾರಂಭಿಸುವುದು, ಯುವ ವಕೀಲರ ಶಿಷ್ಯ ವೇತನ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಈ ಹಿಂದೆ 2019-2021 ವರೆಗೆ ತಾವು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿದ್ದಾಗ ಕೊರೊನಾ ಕಾರಣಕ್ಕೆ ಗಮನಾರ್ಹ ಕೆಲಸ ಮಾಡಲು ಅವಕಾಶ ಸಿಗಲಿಲ್ಲ.
ಆದರೂ ಕೊರೊನಾ ಕಾಲದಲ್ಲಿ ವಕೀಲರಿಗೆ ಕಿಟ್ ವಿತರಣೆ, ಕೆಕೆಆರ್ ಡಿಬಿ ಅನುದಾನದ 70 ವೆಚ್ಚದಲ್ಲಿ ನ್ಯಾಯಾಲಯದ ಆವರಣದಲ್ಲಿ ಪ್ಲಾಟ್ ಫಾರ್ಮ್ ನಿರ್ಮಾಣ, ಕೊಪ್ಪಳದಲ್ಲಿ 5 ದಿನಗಳ ವಕೀಲರ ಕಾರ್ಯಾಗಾರ ನಡೆಸಿದ್ದು ಇದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅಂದಾನಗೌಡ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಚಿದಾನಂದಗೌಡ ಪೊಲೀಸ್ ಪಾಟೀಲ್, ಜಂಟಿ ಕಾರ್ಯದರ್ಶಿ ಸ್ಥಾನದ ಬಸವರಾಜ ಮೇಲುಸಕ್ಕರಿ, ಖಜಾಂಚಿ ಸ್ಥಾನದ ಅಭ್ಯರ್ಥಿ ವೀಣಾ ವಾಲ್ಮೀಕಿ, ಸಂಘದ ಹಂಗಾಮಿ ಅಧ್ಯಕ್ಷರು ಎ.ವಿ.ಕಣವಿ ಉಪಸ್ಥಿತರಿದ್ದರು.