ಕೊಪ್ಪಳ : ನೂತನ ಸಿಎಂ ಡಿ.ಕೆ. ಶಿವಕುಮಾರ ಸಂಪುಟದಲ್ಲಿ ಗಾಣಿಗ ಸಮುದಾಯದ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಗಾಣಿಗ ಸಂಘದ ಜಿಲ್ಲಾಧ್ಯಕ್ಷರು ತೋಟಪ್ಪ ಕಾಮನೂರು ಒತ್ತಾಯಿಸಿದ್ದಾರೆ.
ಅವರುವಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ 2023 ರಲ್ಲಿ ಡಿ.ಕೆ. ಶಿವಕುಮಾರ ಅವರ ಆಹ್ವಾನ ಮತ್ತು ಸೂಕ್ತ ಸ್ಥಾನಮಾನದ ಭರವಸೆ ಮೇರೆಗೆ ಲಕ್ಷ್ಮಣ ಸವದಿಯವರು ಕಾಂಗ್ರೆಸ್ ಸೇರಿದ್ರು.
ಈಗ ಡಿ.ಕೆ. ಶಿವಕುಮಾರ ಅವರೆ ಮುಖ್ಯಮಂತ್ರಿ ಆಗಿರುವಾಗ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಅಪಾರ ರಾಜಕೀಯ ಅನುಭವಗಳ ಸವದಿಯವರು ಸಹಕಾರ ಇಲಾಖೆ ಸಚಿವರಾಗಿ ಜನಮನ ಗೆದ್ದಿರುವ ವ್ಯಕ್ತಿ. ಅಥಣಿ ಕ್ಷೇತ್ರ ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಲು ಅವರು ಕಾರಣ.
ಈ ಹಿಂದೆ ಅವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಮ್ಮ ಗಾಣಿಗ ಸಮಾಜವನ್ನು ಹೆಚ್ಚು ಪ್ರತಿನಿಧಿಸುವ ವ್ಯಕ್ತಿಯಾಗಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಗಾಣಿಗ ಸಮಾಜಕ್ಕೆ ನ್ಯಾಯ ಒದಗಿಸಬೇಕು.
ಸವದಿಯವರು ಕಾಂಗ್ರೆಸ್ ಸೇರುವಾಗ ಅವರ ನಾಯಕತ್ವ ಮೆಚ್ಚಿ ಬಿಜೆಪಿಯಲ್ಲಿದ್ದಂತ ನಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ.
ಸಂಪುಟದಲ್ಲಿ ಗಾಣಿಗ ಸಮಾಜಕ್ಕೆ ನ್ಯಾಯಕ್ಕಾಗಿ ಜೂನ್ 15 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ವಿಚಾರ ಇದೆ ಎಂದು ತೋಟಪ್ಪ ಕಾಮನೂರು ಹೇಳಿದರು.
ಇದೇ ಸಂದರ್ಭದಲ್ಲಿ ಗಾಣಿಗ ಸಂಘದ ಗೌರವ ಅಧ್ಯಕ್ಷರಾದ ರುದ್ರಮನಿ ಗಾಳಿ ಮಾತನಾಡಿ ಕಾಂಗ್ರೆಸ್ ಸರಕಾರದ ಇತಿಹಾಸದಲ್ಲಿ ಗಾಣಿಗರಿಗೆ ಮಂತ್ರಿ ಸ್ಥಾನ ಕೊಟ್ಟ ಉದಾಹರಣೆ ಇಲ್ಲ. ಇದು ರಾಜ್ಯದ ಗಾಣಿಗರಿಗೆ ನೋವಿನ ಸಂಗತಿ. ಅದಕ್ಕೆ ಈ ಸಲವಾದರೂ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ಕೊಡಬೇಕು.
ಸಣ್ಣ ಸಣ್ಣ ಸಮುದಾಯಗಳನ್ನ ಗುರುತಿಸಿ ರಾಜಕೀಯ ಸ್ಥಾನಮಾನ ಕೊಟ್ಟ ಇತಿಹಾಸ ಕಾಂಗ್ರೆಸ್ ಗೆ ಇದೆ. ರಾಜ್ಯದಲ್ಲಿ ದೊಡ್ಡ ಸಮಾಜವಾಗಿರುವ ಗಾಣಿಗ ಸಮಾಜಕ್ಕೂ ಈ ಸಲ ಸಂಪುಟದಲ್ಲಿ ಸ್ಥಾನ ಅದೂ ಲಕ್ಷ್ಮಣ್ ಸವದಿಯವರಿಗೆ ಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಟಿ. ಸಂಗನಗೌಡ, ಮಂಜುನಾಥ ಹಂದ್ರಾಳ ಈರಣ್ಣ ಗಾಣಿಗೇರ ಹಾಗೂ ಇತರರು ಉಪಸ್ಥಿತರಿದ್ದರು.