ಕೊಪ್ಪಳ : ಡಿ.ಕೆ.ಶಿವಕುಮಾರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಜಮೀರ ಅಹಮ್ಮದ ಖಾನ್ ರಿಗೆ ಸಚಿವ ಸ್ಥಾನ ಕೊಡದಿರುವುದು ಖಂಡಿಸಿ ಕೊಪ್ಪಳದಲ್ಲಿ ಇಂದು ನಡೆದ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ಬಂದಿತು.
ಜಮೀರ ಅಹಮ್ಮದ ಪರ ಪ್ರತಿಭಟನೆಗೆ ನಿರೀಕ್ಷಿಸಿದ ಮಟ್ಟದಲ್ಲಿ ಜನರು ಬಾರದೆ ಬಂದವರ ಸಂಖ್ಯೆ ಕಡಿಮೆ ಇದ್ದದ್ದು ಕೂಡ ಅಚ್ಚರಿ ಮೂಡಿಸಿತು.
ಪ್ರತಿಭಟನೆಗೆ ಬಂದವರಲ್ಲಿ ಕೊಪ್ಪಳ ಸುತ್ತಲಿನ ಗ್ರಾಮಗಳು ಹಾಗೂ ಕುಕುನೂರು, ಯಲಬುರ್ಗಾ, ಗಂಗಾವತಿ ತಾಲೂಕುಗಳಿಂದ ಬಂದ ಜನರು ಇದ್ದರು. ಹೀಗಾಗಿ ಕೊಪ್ಪಳ ನಗರದಲ್ಲಿ ಈ ಪ್ರತಿಭಟನೆಗೆ ನಿರೀಕ್ಷಿಸಿದ ಸ್ಪಂದನೆ ದೊರಕಿಲ್ಲ ಎಂಬ ಚರ್ಚೆ ನಡೆದಿದೆ.
ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಶೇ. 33 ರಷ್ಟು ಮುಸ್ಲಿಂ ಮತದಾರರು ಇದ್ದರೂ ಜಮೀರ್ ಅಹ್ಮದ್ ಪರವಾಗಿ ಸಮುದಾಯದ ಜನ ದೊಡ್ಡ ಪ್ರಮಾಣದಲ್ಲಿ ಇಂದಿನ ಪ್ರತಿಭಟನೆಗೆ ಆಗಮಿಸಿದೆ ಇರುವುದು ಆಶ್ಚರ್ಯ ತಂದಿತು.
ಕಾಂಗ್ರೆಸ್ಸಿನವರೆ ಆದ ಜಮೀರ್ ಅಹ್ಮದ್ ಖಾನ್ ಪರ ಕಾಂಗ್ರೆಸ್ಸಿನಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಕೆಲ ಮಾಜಿ ಕೌನ್ಸಿಲರ್ ಗಳು, ಸರಕಾರದ ವಿವಿಧ ಸಮಿತಿಗಳಿಗೆ ನಾಮನಿರ್ದೇಶನ ಆಗಿರುವವರೂ ಗೈರು ಆಗಿದ್ದರು. ಅಲ್ಪಸಂಖ್ಯಾತ ಸಮುದಾಯದ ಯುವಕರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಜಮೀರ್ ಪರ ಬಂದಿರಲಿಲ್ಲ.
ಕಳೆದ ಮೂರು ವರ್ಷಗಳ ಕಾಂಗ್ರೆಸ್ ಆಡಳಿತ ವೈಖರಿಯಿಂದ ಅಲ್ಪಸಂಖ್ಯಾತರು ಅಸಮಾಧಾನಗೊಂಡಿದ್ದು ಆ ಕಾರಣದಿಂದಲೂ ಇಂದಿನ ಪ್ರತಿಭಟನೆಗೆ ಆಗಮಿಸಿಲ್ಲ ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ.
ಜಮೀರ ಅಹ್ಮದ ಖಾನ್ ಸಚಿವರಾಗಿದ್ದ ಅವಧಿಯಲ್ಲಿ ಮುಸ್ಲಿಮರ 2 B ಮೀಸಲಾತಿ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಮುಸ್ಲಿಮರ ಸಮಸ್ಯೆಗಳ ಬಗ್ಗೆ ಸರಕಾರ ಮಟ್ಟದಲ್ಲಿ ಗಟ್ಟಿಯಾಗಿ ಮಾತನಾಡಲಿಲ್ಲ ಎಂಬ ಅಸಮಾಧಾನವೂ ಇಂದಿನ ಪ್ರತಿಭಟನೆಗೆ ಸ್ಪಂದಿಸದೆ ಇರಲು ಕಾರಣ ಆಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಜಮೀರ ಅಹ್ಮದ ಖಾನ್ ಪರ ಗಂಗಾವತಿಯ ಅಲ್ಪಸಂಖ್ಯಾತ ಸಮುದಾಯದ ಕೆಲ ಮುಖಂಡರು ಕೊಪ್ಪಳದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಕೊನೆ ಘಳಿಗೆಯಲ್ಲಿ ರದ್ದಾಗಿದ್ದು ಕೂಡ ಅಚ್ಚರಿ ತಂದಿದೆ.
----------------------
ಜಮೀರ್ ಅಹ್ಮದ ಖಾನ್ ಪರ ಇಂದು ಮಧ್ಯಾಹ್ನ ಅಶೋಕ ಸರ್ಕಲ್ ನಲ್ಲಿ ಸೇರಿದ ಪ್ರತಿಭಟನಾಕಾರರು ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹುದ್ದೆ ತಪ್ಪಿಸಲೆಂದೇ ಪಕ್ಷ ವಿರೋಧಿ ಚಟುವಟಿಕೆ ಆರೋಪದ AI ಆಡಿಯೋ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ನಾವು ಜಮೀರ ಅಹ್ಮದ ಖಾನ್ ಅವರ ಜೊತೆ ಇದ್ದೇವೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ನೀಡಲೇಬೇಕು.
ಒಂದು ವೇಳೆ ನಮ್ಮ ಈ ಆಗ್ರಹ ನಿರ್ಲಕ್ಷಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.