ಕೊಪ್ಪಳ : ನಿರ್ದೇಶಕ ಪ್ರೇಮ್ ರ "ಕೆಡಿ ದಿ ಡೆವಿಲ್" ಚಿತ್ರದ "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ 'ಎಂಬ ಹಾಡಿನ ವಿವಾದ ರಾಜ್ಯದಲ್ಲಿ ತೀವ್ರಗೊಂಡಿದ್ದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ( ಎಐಎಂಎಸ್ ಎಸ್)ಯ ಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿ ಹಾಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೆಡಿ ಸಿನಿಮಾ ಹಾಡಿನಲ್ಲಿ ಸಭ್ಯತೆಯ ಚೌಕಟ್ಟು ಮುರಿದು, ನಿರ್ದೇಶಕರು ಸಾಮಾಜಿಕ ಬೇಜವಾಬ್ದಾರಿತನ ಪ್ರದರ್ಶಿಸಿ ಹಾಡಿನ ಸಾಹಿತ್ಯ ಅಶ್ಲೀಲವಾಗಿ ರಚಿಸಿ ಮಹಿಳೆಯರನ್ನು ಭೋಗದ ವಸ್ತು ಎಂಬಂತೆ ಚಿತ್ರಿಸಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಮೌಲ್ಯ ಆದರ್ಶ ಕಳೆದುಕೊಂಡು, ವಿಕೃತತೆ ಕ್ರೌರ್ಯ ಹಾಗೂ ಹಿಂಸಾಪ್ರವೃತ್ತಿಗೆ ಬಲಿಯಾಗುತ್ತಿರುವ ಸಮಾಜದಲ್ಲಿ ಇಂಥ ಕೀಳು ಅಭಿರುಚಿಯ ಹಾಡು ತಪ್ಪು ದಾರಿ ತುಳಿಯಲು ಪ್ರೇರೇಪಿಸುವಂತಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧಗಳ ಸಂದರ್ಭದಲ್ಲಿ ಹೆಣ್ಣನ್ನು ಬಳಸಿ ಬಿಸಾಕುವ, ಮೋಜಿನ ವಸ್ತುವಿನಂತೆ ಬಿಂಬಿಸುವ ಅಶ್ಲೀಲ ಜಾಹೀರಾತು, ಸಿನಿಮಾ ಸಾಹಿತ್ಯ ಮನುಷ್ಯರನ್ನು ಮೃಗೀಯರನ್ನಾಗಿಸಿ ಅಪರಾಧಗಳನ್ನು ಹೆಚ್ಚಿಸುತ್ತದೆ.
ಕೆ ಡಿ - ದಿ ಡೆವಿಲ್ ಸಿನಿಮಾ ಸೆನ್ಸಾರ್ ಮುನ್ನವೆ ಹಾಡನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿರುವುದು ಸೆನ್ಸಾರ್ ಮಂಡಳಿಯ ವೈಫಲ್ಯ ತೋರಿಸುತ್ತದೆ.
ಇದಕ್ಕೂ ಮುನ್ನ ಟಾಕ್ಸಿಕ್ ಸಿನಿಮಾ ಟೀಸರ್‌ನಲ್ಲಿ ನಟ, ನಟಿಯರು ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು
ಇಂಥ ದೃಶ್ಯಗಳಿರುವ ಸಿನಿಮಾಗಳಿಗೆ ಚಿತ್ರಮಂದಿರದಲ್ಲಿ ಮಕ್ಕಳನ್ನು ಪ್ರವೇಶಿಸದಂತೆ ತಡೆಯಬೇಕು.
ಟೀಸರ್‌ಗಳಿಗೂ ಸ್ಪಷ್ಟ ಮಾರ್ಗಸೂಚಿಗಳನ್ನು ಸೆನ್ಸಾರ್ ಮಂಡಳಿ ರೂಪಿಸಬೇಕು. ಮಂಡಳಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಶಾರದಾ ಗಡ್ಡಿ ಆಗ್ರಹಿಸಿದ್ದಾರೆ.