ಕೊಪ್ಪಳ ನಗರಸಭೆಯ 336 ಕಾಮಗಾರಿಗಳಲ್ಲಿ 10 ಕೋಟಿ ರೂಪಾಯಿಯಷ್ಟು ಹಗರಣ ನಡೆದಿದೆ ಎಂಬ ದೂರಿನಂತೆ ಲೋಕಾಯುಕ್ತರ ದಾಳಿಯಿಂದ ರಾಜ್ಯದಲ್ಲಿ ಚರ್ಚೆ ಜೋರಾಗಿದೆ. ಈಗ ಅಶೋಕ ವೃತ್ತದ ನವೀಕರಣದ ಹೆಸರಿನಲ್ಲಿ ನಡೆದ ಕಳಪೆ ಕಾಮಗಾರಿಗೂ ತನಿಖೆ ಶುರುವಾಗಲಿದೆ.
ಕೊಪ್ಪಳ ನಗರಸಭೆಯ ವಿವಿಧ 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ರಾಜ್ಯಾದ್ಯಂತ ಸುದ್ದಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಅಶೋಕ ವೃತ್ತದ ನವೀಕರಣದ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ಬಳಸಿ ಕಳಪೆ ಕೆಲಸ ಮಾಡಲಾಗಿದೆ ಎಂಬ ದೂರಿನ ವಿಚಾರದಲ್ಲಿ ಈ ತಿಂಗಳು ತನಿಖೆ ನಡೆಯಲಿದೆ.
ದೂರುದಾರ ಶಫೀಕ್ ಕೊಟ್ಟೂರು ನೀಡಿರುವ ದೂರನ್ನು ಪರಿಗಣಿಸಿ, ಡಿಸೆಂಬರ್ 23 ರಂದು ಲೋಕಾಯುಕ್ತರ ತಾಂತ್ರಿಕ ತಂಡ ಕೊಪ್ಪಳಕ್ಕೆ ಆಗಮಿಸಲಿದೆ. ಸ್ವಾತಂತ್ರ್ಯ ಹೋರಾಟದ ಹುತಾತ್ಮರನ್ನು ಸ್ಮರಿಸುವ ನಿಟ್ಟಿನಲ್ಲಿ ನಿರ್ಮಿಸಲ್ಪಟ್ಟಿರುವ ಈ ಸರ್ಕಲ್, ರಾಜ್ಯದ ವಿಶೇಷ ಸರ್ಕಲ್‌ಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
“ಅಂದಾಜು 8–10 ಲಕ್ಷದ ಕೆಲಸಕ್ಕೆ 40 ಲಕ್ಷ ಬಿಲ್ ಎತ್ತಿದ್ದಾರೆ. ಕಳಪೆ ಕೆಲಸಕ್ಕೆ ಜನರ ಹಣ ಹಾಳು ಮಾಡಿದವರ ವಿರುದ್ದ ಕಠಿಣ ಕ್ರಮ ಆಗಬೇಕು.”
— ಶಫೀಕ್ ಕೊಟ್ಟೂರು
ಸುಂದರೀಕರಣ ಮತ್ತು ನವೀಕರಣದಲ್ಲಿ ಅಂದಾಜು 8–10 ಲಕ್ಷ ರೂನಲ್ಲಿ ಆಗಬೇಕಾದ ಕೆಲಸಕ್ಕೆ 35–40 ಲಕ್ಷ ರೂ. ಬಿಲ್ ಎತ್ತಲಾಗಿದೆ ಎನ್ನುವುದು ದೂರು. ರಾಜಕಾರಣಿಯೊಬ್ಬರ ಸಹೋದರನ ಹೆಸರಿಗೆ ಟೆಂಡರ್ ನೀಡಿ, ಅಧಿಕಾರಿಣಿಯೊಬ್ಬರ ಪತಿಗೆ ಕೆಲಸ ಮಾಡಿಸುವ ಮೂಲಕ ಸೂತ್ರಬದ್ಧವಾಗಿ ಹಗರಣ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸರ್ಕಲ್‌ನಲ್ಲಿ 2–3 ಪಟ್ಟು ಹೆಚ್ಚು ಹಣ ಖರ್ಚು ಮಾಡಿದರೂ ಗುಣಮಟ್ಟ ಉಳಿದಿಲ್ಲ. ಆನೆ ಮುಖದ ಮೂರ್ತಿಗಳಿಗೆ ಗುಜರಾತ್‌ನಿಂದ ಕಲ್ಲು ತರಿಸಬೇಕಿತ್ತು ಎಂಬ ಯೋಜನೆ ಇದ್ದರೂ, ಸ್ಥಳೀಯ ಕಲ್ಲನ್ನು ಬಳಸಿ ಕಡಿಮೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ವಾಹನ ಸರ್ಕಲ್‌ಗೆ ಸ್ಪರ್ಶಿಸಿದ್ದಕ್ಕೆ ಕಲ್ಲುಗಳು ಕಳಚಿ ಬಿದ್ದ ಘಟನೆ ಜನರ ಅಸಮಾಧಾನ ಹೆಚ್ಚಿಸಿದೆ.