ಕೊಪ್ಪಳ: : ಸಂಸದ ರಾಜಶೇಖರ ಹಿಟ್ನಾಳ ಮಾಲಿಕತ್ವದ ಪ್ರೇರಣಾ ಕಂಪನಿ ವಿರುದ್ದ ಸೆಡ್ಡು ಹೊಡೆದಿರುವ ಗುತ್ತಿಗೆದಾರರು ನ.12 ರಂದು ಜಿಲ್ಲಾಡಳಿತ ಭವನ ಮುಂದೆ ಧರಣಿಗೆ ಸಜ್ಜಾಗಿದ್ದಾರೆ. ಆವತ್ತು ತಮ್ಮ ಬೇಡಿಕೆ ಈಡೇರದಿದ್ದರೆ ನ.13 ರಿಂದ ಸರಕಾರಿ ಟೆಂಡರ್ ಕಾಮಗಾರಿ ಬಂದ್ ಮಾಡಲಿದ್ದಾರೆ.
ಈ ಬಗ್ಗೆ ನಿನ್ನೆ ಶನಿವಾರ ತಾಲೂಕು ಗುತ್ತಿಗೆದಾರರ ಸಂಘದ ಸಭೆ ನಡೆದಿದೆ. ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ ಕೃಷ್ಣ ಇಟ್ಟಂಗಿ, ಜಿಲ್ಲಾಧ್ಯಕ್ಷರಾದ ಸುರೇಶ ಭೂಮರಡ್ಡಿ ಇದ್ದರು.
ಕೊಪ್ಪಳ ಜಿಲ್ಲಾ ಸ್ಟೋನ್ ಕ್ರಷರ್ ಅಸೋಸಿಯೇಷನ್ ನವರು ಪ್ರೇರಣಾ ಕನ್‌ಸ್ಟ್ರಕ್ಷನ್ ಮೂಲಕವೆ ಕಂಕರ್ ಖರೀದಿಸಬೇಕು ಎಂಬ ನೀತಿ ಮಾಡಿದ್ದನ್ನು ಖಂಡಿಸಿ ಪ್ಯಾಕೇಜ್ ಟೆಂಡರ್ ಪದ್ಧತಿ ರದ್ದುಗೊಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ನಿರ್ಧಾರ ಸಭೆಯಲ್ಲಿ ಆಗಿದೆ.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಗುತ್ತೇದಾರರು ಕೊಪ್ಪಳ ಜಿಲ್ಲೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದು ಅವರನ್ನು ನಿರ್ಬಂಧಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ನವೆಂಬರ್ 12ರಂದು ಬೆಳಿಗ್ಗೆ 9.30ಕ್ಕೆ ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘದಿಂದ ಪ್ರತಿಭಟನಾ ಮೆರವಣಿಗೆಗೆ ತಾಲ್ಲೂಕು ಗುತ್ತೇದಾರರು ವಾಹನಗಳೊಂದಿಗೆ ಭಾಗವಹಿಸಲಿದ್ದಾರೆ. ಅಂದು ಜಿಲ್ಲಾಡಳಿತ ಭವನ ಮುಂದೆ ಧರಣಿ ನಡೆಯಲಿದೆ. ಆವತ್ತೆ ಬೇಡಿಕೆಗಳು ಈಡೇರದಿದ್ದರೆ ನವೆಂಬರ್ 13ರಿಂದ ಎಲ್ಲಾ ಗುತ್ತೇದಾರರು, ಲ್ಯಾಂಡ್ ಆರ್ಮಿ ಹಾಗೂ ನಿರ್ಮಿತಿ ಕೇಂದ್ರದವರು ಸೇರಿ ಕಾಮಗಾರಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಅರಕೇರಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಹನುಮೇಶ ಕಡೇಮನಿ, ಹಿರಿಯ ಗುತ್ತೇದಾರರು ಬಸವರಾಜ ಪುರದ, ಮಲ್ಲಯ್ಯ ಎಲ್.ಎಂ, ಅಪ್ಜಲ್ ಪಟೇಲ್, ಇಬ್ರಾಹಿಂ ಅಡ್ಡೇವಾಲೆ, ಖಾಜಾ ಹುಸೇನ ಗದಗ, ಮಹಾದೇವಪ್ಪ, ದ್ಯಾವಣ್ಣ ಕರಿಗಾರ, ಪರಶುರಾಮ ಕಿಡದಾಳ, ಪ್ರದೀಪ್, ಕಾಲೇಶ ಲಕ್ಮಾಪೂರ, ಶ್ರೀಧರ ಬನ್ನಿಕೊಪ್ಪ, ಚಂದ್ರಶೇಖರ ಹಳ್ಳಿ, ಸುರೇಶ ತಟ್ಟಿ, ವಿರೇಶ ಮ್ಯಾಗಳಮಠ, ಮರ್ದಾನ ಅಲಿ ಮಿಠಾಯಿ, ಈರಪ್ಪ ಹುಣಸಿಮರದ, ಕನಕಮೂರ್ತಿ, ಶರಣಪ್ಪ ಬ್ಯಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.