ಕೊಪ್ಪಳ ಹತ್ತಿರದ ಬಹದ್ದೂರ್ ಬಂಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಕಂಪೌಂಡ್ ಎತ್ತರಿಸುವ ವಿಶೇಷ ಕಾಮಗಾರಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕೈಜೋಡಿಸಿದರು. ವಿಶೇಷವಾಗಿ, ಹಳೆಯ 30 ವಿದ್ಯಾರ್ಥಿಗಳು ನೇರವಾಗಿ ಶ್ರಮವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಾಂದಸಾಬ ಕಿಲ್ಲೆದಾರ, ಕೊಪ್ಪಳ ನಗರಸಭೆ ಅಧ್ಯಕ್ಷರು ಅಮ್ಜದ್ ಪಟೇಲ್, ಎಸ್ಡಿಎಂಸಿ ಅಧ್ಯಕ್ಷರು ಮಂಜುನಾಥ ಕುರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಯೋಗಾನಂದ, ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರು ಶಿವಣ್ಣ ಗ್ಯಾನಪ್ಪನವರ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು ಮೆಹಬೂಬ ಮಣ್ಣೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶಾಲೆಯ ಹೆಚ್.ಎಂ. ಬೀರಪ್ಪ ಅಂಡಗಿ ಹಾಗೂ ಸಿಆರ್ ಪಿ ಹನುಮಂತಪ್ಪ ಕುರಿ ಎಲ್ಲ ತಯಾರಿಯೊಂದಿಗೆ ಮೇಲುಸ್ತುವಾರಿ ವಹಿಸಿದ್ದರು.
ಬಿಸಿಊಟದ ಮಹಿಳೆಯರು ಕೆಲಸದಲ್ಲಿ ನಿರತರಿಗೆ ಉಪಹಾರ, ಊಟ, ನೀರು ಮತ್ತು ಚಹ ಒದಗಿಸುವ ಮೂಲಕ ಬೆಂಬಲ ನೀಡಿದ್ದಾರೆ.
ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ 50,000 ರೂ. ನಗದು, 120 ಚೀಲ ಸಿಮೆಂಟ್, 2,500 ಸಿಮೆಂಟ್ ಬ್ರಿಕ್ಸ್, 10 ಟ್ರಿಪ್ ಮರಳು ನೀಡಿದ್ದು, ಶಾಲೆಯ ಸುಂದರ-ಸುಭದ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.
ಈ ಮೂಲಕ ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಒಗ್ಗಟ್ಟಿನ ಸಕಾರಾತ್ಮಕ ದೃಶ್ಯ ಕಂಡು ಬಂದಿದೆ. ಸಮುದಾಯದ ಸಹಕಾರದಿಂದ ಶಾಲೆಯ ಭವಿಷ್ಯ ಇನ್ನಷ್ಟು ಸುಧಾರಣೆಗೆ ಒಳಗಾಗಲಿದೆ.
ಈ ಶಾಲೆಯ ಕಂಪೌಂಡ್ 2012 ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ನಿರ್ಮಿಸಲಾಗಿತ್ತು. ಆಗ ಶಾಸಕರಾಗಿದ್ದ ಸಂಗಣ್ಣ ಕರಡಿ ಉದ್ಘಾಟಿಸಿದ್ದರು.
"ನೆಲ ಸಮತಟ್ಟು, ಬೋರ್ಡ್ ಅಳವಡಿಕೆ, ಸ್ಮಾರ್ಟ್ ಕ್ಲಾಸ್, ಡೆಸ್ಕ್ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲು ಶ್ರಮಿಸುತ್ತಿದ್ದೇವೆ. ನಾಳೆ ಕೂಡ ಕಾಮಗಾರಿ ಮುಂದುವರಿಯಲಿದೆ." - ಬೀರಪ್ಪ ಅಂಡಗಿ ಮುಖ್ಯ ಗುರುಗಳು