ಕೊಪ್ಪಳ : ಹತ್ತಿರದ ಬಹದ್ದೂರ್ ಬಂಡಿ - ಬಿ. ಹೊಸಳ್ಳಿ ರಸ್ತೆ ಕೆಲ ತಿಂಗಳಿಂದ ಹದಗೆಟ್ಟಿದ್ದು ರಸ್ತೆ ಸಂಚಾರಕ್ಕೆ ಬಹಳ ತೊಂದರೆಯಾಗಿದೆ.
ಮಳೆಯಾಗದಿದ್ದರೆ ರಸ್ತೆಗಳ ತಗ್ಗುಗಳ ನಡುವೆ ಸರ್ಕಸ್ ಮಾಡುತ್ತ ಸಂಚರಿಸಬೇಕು. ಮಳೆಯಾದರೆ ರಾಡಿ ಮಧ್ಯೆ ಸಂಚರಿಸಬೇಕು.
ಜನಪ್ರತಿನಿಧಿಗಳಿಗೆ ಹೇಳಿ ಹೇಳಿ ರೋಸಿಹೋಗಿರುವ ಜನ ಸುಮ್ಮನಾಗಿದ್ದರು. ಹೊಸಳ್ಳಿ ಕೆರೆ ಹತ್ತಿರ ರಸ್ತೆ ತೀವ್ರ ಹದಗೆಟ್ಟಿದ್ದರಿಂದ ಕೆರೆಯ ಏರಿ ಮೇಲೆ ಜನ ಸಂಚರಿಸುತ್ತಿದ್ದಾರೆ. ಕೆಲವರು ಬಿದ್ದು ಸಣ್ಣಪುಟ್ಟ ಗಾಯವಾಗಿವೆ.
ಕೆಲ ದಿನಗಳಿಂದ ಸತತ ಮಳೆ ಆಗಿದ್ದರಿಂದ ಹೊಸಳ್ಳಿ ರಸ್ತೆ ಈಗ ಮತ್ತಷ್ಟು ಹದಗೆಟ್ಟಿದ್ದು ಇಂದು ಶುಕ್ರವಾರ ಬೆಳಗ್ಗೆ ಶಾಲಾ ವಿದ್ಯಾರ್ಥಿಗಳು ರಸ್ತೆಗೆ ಅಡ್ಡಲಾಗಿ ಮರದ ಕೊಂಬೆ ಇಟ್ಟು ಸುಮಾರು ಒಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಬಸ್ ನ್ನು ತಡೆದು ರಸ್ತೆ ದುರಸ್ತಿಗಾಗಿ ಪ್ರತಿಭಟಿಸಿ ರಸ್ತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಶಾಸಕರು ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.