ಕೊಪ್ಪಳ : ಧಾರ್ಮಿಕ ಕಾರ್ಯಗಳಿಗೆ ಲಕ್ಷಾಂತರ ಮತ್ತು ರಾಜಕೀಯ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರುವುದು ಸಾಮಾನ್ಯ. ಆದರೆ ಆರೋಗ್ಯ ಮತ್ತು ಔಷಧಿಗಾಗಿ ಒಂದು ಪುಟ್ಟ ಹಳ್ಳಿಯಲ್ಲಿ ಕನಿಷ್ಠ ಸೌಲಭ್ಯಗಳ ನಡುವೆಯೂ 25 ಸಾವಿರಕ್ಕೂ ಹೆಚ್ಚು ಜನ ಅದೂ ವರ್ಷಕ್ಕೆ ಒಮ್ಕೆ ಸೇರುವುದು ಇಲ್ಲಿ ವಿಶೇಷ.
ಅಂದ್ರೆ ಮೃಗಶಿರ ಮಳೆ ಆರಂಭವಾಗುವ ದಿನವೆ ಇಲ್ಲಿ ಸಾವಿರಾರು ಜನ ಸೇರುತ್ತಾರೆ. ವಿಶೇಷ ಏನಂದ್ರೆ ಮೃಗಶಿರ ಮಳೆ ಆರಂಭದ ದಿನ ಈ ಗ್ರಾಮದಲ್ಲಿ ಅಸ್ತಮಾಗೆ ಉಚಿತವಾಗಿ ಔಷಧಿ ಕೊಡಲಾಗುತ್ತದೆ.
ಅದುವೆ ಕುಟುಗನಹಳ್ಳಿ ಗ್ರಾಮ. ಕೊಪ್ಪಳದಿಂದ 8 ಕಿ.ಮೀ ದೂರದಲ್ಲಿದೆ ಈ ಗ್ರಾಮ. ಕೊಪ್ಪಳ - ಗಂಗಾವತಿ ರಸ್ತೆಯಲ್ಲಿ ಬರುವ ಬಸಾಫುರ ಗ್ರಾಮದಿಂದ ಉತ್ತರಕ್ಕೆ ಈ ಗ್ರಾಮ ಇದೆ.
ಈ ಗ್ರಾಮದಲ್ಲಿದ್ದ ದಿ. ವ್ಯಾಸರಾವ್ ಕುಲಕರ್ಣಿ ಅವರು ಅಸ್ತಮಾಗೆ ಆಯುರ್ವೇದ ಮಾದರಿಯ ಔಷಧಿಯನ್ನು ಉಚಿತವಾಗಿ ಕೊಡುತ್ತಿದ್ದರು. ಅವರ ನಂತರ ಅವರ ಪುತ್ರ ಅಶೋಕರಾವ್ ಔಷಧಿ ನೀಡುವ ಪದ್ದತಿ ಮುಂದುವರೆಸಿದ್ದಾರೆ. ಈ ಔಷಧಿಯ ನಿಯಮ ಅಂದ್ರೆ ಮೃಗಶಿರ ಮಳೆ ಆರಂಭ/ ಕೂಡುವ ಸರಿಯಾದ ಸಮಯಕ್ಕೆ ಔಷಧಿ ನುಂಗಬೇಕು.
ಮಳೆ ಕೂಡುವ ಆ ಸಮಯಕ್ಕಾಗಿ ಈ ಗ್ರಾಮಕ್ಕೆ ರಾಜ್ಯದ ಅನೇಕ ಊರುಗಳಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಜನ ಆಗಮಿಸುತ್ತಾರೆ. ಅವರಿಗೆಲ್ಲ ಉಚಿತವಾಗಿ ಔಷಧಿ ನೀಡಲಾಗುತ್ತದೆ. ಈ ಸಲ ಜೂನ್ 8 ರಂದು ಅಶೋಕರಾವ್ ನೀಡಿದ ಔಷಧಿಯನ್ನು ಮಧ್ಯಾಹ್ನ 1.23 ಕ್ಕೆ ಅಸ್ತಮಾ ಇರುವವರು ಸೇವಿಸಿದರು. ಈ ಔಷಧಿ ನೀಡುವ ಪರಂಪರೆ ಕಳೆದ 55 ವರ್ಷದಿಂದ ನಡೆಯುತ್ತಿದೆ. ಈ ಸಲ
ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು.
ಪ್ರತಿ ವರ್ಷ ಔಷಧಿಗಾಗಿ ಬರುವ ಸಾವಿರಾರು ಜನಕ್ಕೆ ರಾಯಚೂರಿನ ಗೋಪಾಲಕೃಷ್ಣ ಶೆಟ್ಟಿಯವರು ಔಷಧಿ ಮತ್ತು ಉಪಹಾರದ ವ್ಯವಸ್ಥೆ ಮಾಡಿಸುತ್ತಾರೆ.
ಯಾರಿಗಾದರೂ ಅಸ್ತಮಾ ಇದ್ದರೆ ಈ ಔಷಧಿ ಪಡೆಯಲು ಒಂದು ವರ್ಷ ಕಾಯಬೇಕು. ಅದೂ ಮೃಗಶಿರ ಮಳೆ ಕೂಡುವ ದಿನದವರೆಗೆ.