ಕೊಪ್ಪಳ : ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಒದಗಿಸುವುದು, ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ಮಾಡುವ ನೌಕರರನ್ನು ವಿಶೇಷ ಪ್ರಕರಣ ಅಡಿಯಲ್ಲಿ ಖಾಯಂ ನೌಕರರನ್ನಾಗಿ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಮುಷ್ಕರ ಆರಂಭಿಸಿದ್ದು ಬೇಡಿಕೆ ಈಡೇರದಿದ್ದರೆ ನೀರು ಸರಬರಾಜು ಕೂಡ ನಿಲ್ಲಿಸಲು ಯೋಚಿಸುತ್ತೇವೆ ಎಂದು ಪೌರಸೇವಾ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಲಾಲಸಾಬ ಮನಿಯಾರ ಹೇಳಿದರು.
ಶನಿವಾರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ನಮ್ಮ ಯಾವುದೆ ಬೇಡಿಕೆಗಳು 10 ವರ್ಷದಿಂದ ಈಡೇರಿಲ್ಲ. ಬರಿ ಭರವಸೆ ಸಿಗುತ್ತಿವೆ ಹೊರತು ಫಲ ಸಿಗುತ್ತಿಲ್ಲ. ರಾಜ್ಯ ಸರಕಾರಿ ನೌಕರರಿಗೆ ಕೊಡುವ ಸೌಲಭ್ಯಗಳು ಪೌರ ಸೇವಾ ನೌಕರರಿಗೂ ಕೊಡಬೇಕು.
ಸ್ಥಳೀಯ ಸಂಸ್ಥೆಗಳಲ್ಲಿರುವ ದಿನಗೂಲಿ/ ಕ್ಷೇಮಾಭಿವೃದ್ದಿ ಅಧಿನಿಯಮದಡಿ ಇರುವ ನೌಕರರು ಹಾಗೂ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಎಲ್ಲ ವೃಂದದ ನೌಕರರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಬೇಕು.
ಪಟ್ಟಣ ಪಂಚಾಯತಿ, ಪುರಸಭೆಗಳಲ್ಲಿ ಶೇ ನೂರರಷ್ಟು ನೌಕರರನ್ನು ಖಾಯಂಗೊಳಿಸಲಾಗಿದೆ. ಆದರೆ ನಗರಸಭೆಗಳಲ್ಲಿ ಶೇ. 50ರಷ್ಟು ನೌಕರರನ್ನು ಖಾಯಂಗೊಳಿಸಲಾಗಿದೆ.
ಕೊಪ್ಪಳದಲ್ಲಿ 1970 ರಿಂದ ವಾಟರ್ ಮ್ಯಾನ್ ಗಳನ್ನು ಖಾಯಂ ಆಗಿ ನೇಮಿಸಿಕೊಂಡಿಲ್ಲ. ಸ್ವಚ್ಛತಾ ಕಾರ್ಯದ ವಾಹನ ಚಾಲಕರಿಗೆ ನಗರಸಭೆಯಿಂದ ಸಂಬಳ ನೇರ ಪಾವತಿ ಆಗಬೇಕು.
ನಾವು ಈಗ ಸ್ವಚ್ಛತಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೋಮವಾರದ ಅಂದ್ರೆ ಜೂನ್ 2 ರ ನಂತರ ರಾಜ್ಯ ಸಂಘದ ಆದೇಶದ ಬಂದ ನಂತರ ಕುಡಿಯುವ ನೀರಿನ ಸರಬರಾಜು ಕೂಡ ನಿಲ್ಲಿಸಬೇಕಾಗುತ್ತದೆ ಇದು ಅನಿವಾರ್ಯ. ಅದಕ್ಕೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಲಾಲಸಾಬ್ ಮುನಿಯಾರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪೌರ ಸೇವಾ ನೌಕರರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಅಖ್ತರ್ ಅಲಿ, ರಾಜ್ಯ ಪರಿಷತ್ ಸದಸ್ಯರಾದ ವಸಂತ ಬೆಲ್ಲದ ಜಿಲ್ಲಾ ಉಪಾಧ್ಯಕ್ಷರಾದ ಉಪೇಂದ್ರ , ಜಿಲ್ಲಾ ಖಜಾಂಚಿಯಾದ ರಾಜ್ ಮಹಮ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.