ಕೊಪ್ಪಳ : ಬರಿ ಇತಿಹಾಸ ಮೆಲುಕು ಹಾಕಿದರೆ ಸಾಲದು ಪ್ರಸ್ತುತ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ ದಕ್ಕುತ್ತದೆ ಎಂದು ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಮಾಲಾ ಬಡಿಗೇರ ನುಡಿದರು.
ಸಮ್ಮೇಳನದ ಸರ್ವಾಧ್ಯಕ್ಷತೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ 22 ಕೈಗಾರಿಗಳು ಭಾರಿ ಪ್ರಮಾಣದ ಮಾಲಿನ್ಯ ಉಂಟು ಮಾಡುತ್ತಿವೆ. ಕಾರ್ಖಾನೆಗಳಿಂದ ಅನೇಕ ಗ್ರಾಮಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈಗ ಬಲ್ಡೋಟಾ ಕಾರ್ಖಾನೆ ಕೊಪ್ಪಳ ಪಕ್ಕದಲ್ಲಿ ಬೇಡ ಎಂದು ಹೋರಾಟ ನಡೆದರೂ ಸರಕಾರ ಕಾಮಗಾರಿ ತಡೆದಿಲ್ಲ. ಈ ಕಾರ್ಖಾನೆಯಿಂದ ಬಹಳ ಹಾನಿ ಆಗಲಿದೆ. ಕಾರ್ಖಾನೆ ಬೇರೆಡೆ ಸ್ಥಳಾಂತರಿಸಬೇಕು.
ಅಣುಸ್ಥಾವರ ಅಪಾಯಕಾರಿ ಯೋಜನೆ ಆಗಿದೆ. ಜಿಲ್ಲೆಯ ಜನ ಸಮುದಾಯದ ದೃಷ್ಟಿಯಿಂದ ಈ ಯೋಜನೆ ಕೈ ಬಿಡಬೇಕು. ಕೊಪ್ಪಳ ವಿವಿ ಮುಚ್ಚುವ ಬದಲು ಅಗತ್ಯ ಸೌಲಭ್ಯ ಒದಗಿಸವೇಕು ಎಂದ ಅವರು ಈ ಬಾರಿಯ SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಹಲಗೇರಿಯ ವಿದ್ಯಾರ್ಥಿನಿಗೆ 5 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಮಾಲಾ ಬಡಿಗೇರ ಘೋಷಿಸಿದರು.
--------------------
ದಿಕ್ಸೂಚಿ ಭಾಷಣ ಮಾಡಿದ ಶಾಸಕರು ರಾಘವೇಂದ್ರ ಹಿಟ್ನಾಳ ಮಾತನಾಡಿ ಕನ್ನಡ ಭಾಷೆ ಉಳಿದು ಬೆಳೆಯಲು ಕನ್ನಡ ಸಾಹಿತ್ಯ ಸಮ್ಮೇಳನ ಅವಶ್ಯ. ಸಮ್ಮೇಳನಗಳಿಂದ ಸೌಹಾರ್ದ- ಸಂಸ್ಕೃತಿ ಬೆಳವಣಿಗೆ ಕಾರಣ ಆಗಲಿದೆ. ಕೊಪ್ಪಳ ಜಿಲ್ಲೆ ಸಾಹಿತ್ಯ ಸೇರಿದಂತೆ ವಿವಿಧ ರಂಗಕ್ಕೆ ಹಲವಾರು ಸಾಧಕರನ್ನು ನೀಡಿದೆ. ಕಸಾಪ ಮಾಜಿ ಜಿಲ್ಲಾಧ್ಯಕ್ಷರು ದಿ. ರಾಜಶೇಖರ ಅಂಗಡಿ ನೆನಪಿಗೆ ಹಲಗೇರಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವೆ ಎಂದರು.
-------------------
ಪದ್ಮಶ್ರೀ ಭೀಮವ್ವ ಶಿಳ್ಳಿಕ್ಯಾತರ ಸಮ್ಮೇಳನ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಿ.ವಿ.ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ್, ಮಂಜುಳಾ ಕರಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಚೌದರಿ, ಶಂಭುಲಿಂಗನಗೌಡ ಹಲಗೇರಿ, ಮಂಜುನಾಥ ಮ್ಯಾಗಳಮನಿ, ಎಸ್. ಬಾಲಚಂದ್ರನ್ ಹಲಗೇರಿ ಗ್ರಾ.ಪಂ. ಅಧ್ಯಕ್ಷರು ಯಲ್ಲಪ್ಪ ಓಜಿನಹಳ್ಳಿ, ಉಪಾಧ್ಯಕ್ಷರಾದ ವಿರುಪವ್ವ ಬೇಳೂರು ಇತರರು ಉಪಸ್ಥಿತರಿದ್ದರು.
ಸಂತೋಷ ದೇಶಪಾಂಡೆ ಸ್ವಾಗತಿಸಿದರು. ಪ್ರಾಸ್ತಾವಿಕ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿದರು. ರಮೇಶ ತುಪ್ಪದ , ವೀರೇಶ ಕೊಪ್ಪಳ ನಿರೂಪಿಸಿದರು.