ಚಂದ್ರಶೇಖರ ಪಾಟೀಲರು (ಚಂಪಾ) ಅಂದ್ರೆ ಬಂಡಾಯದ ಸಿಡಿಗುಂಡು. ಅವರು ಬದುಕಿನುದ್ದಕ್ಕೂ ತಾವು ನಂಬಿದ ಸಿದ್ದಾಂತಕ್ಕೆ ಬದ್ದವಾಗಿಯೇ ಬದುಕಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷರಾಗಿದ್ದರೂ ಯಾವತ್ತೂ ಅಧಿಕಾರಸ್ಥರೊಂದಿಗೆ ರಾಜಿಯಾಗಲಿಲ್ಲ. ವೇದಿಕೆಗಳಲ್ಲಿ ಅವರ ಮಾತುಗಳೆಂದರೆ ಮೇಷ್ಟ್ರರ ಚಡಿ ಏಟಿನಂತೆ, ಒಮ್ಮೊಮ್ಮೆ ಚಾಟಿ ಏಟಿನಂತೆ ಮತ್ತೊಮ್ಮೆ ಕುಟುಕಿದಂತೆ.
ಅವರು ರಾಜಕೀಯ ವ್ಯಕ್ತಿಗಳಿಂದ ಸದಾ ಅಂತರ ಕಾಯ್ದುಕೊಂಡವರು. ಆದರೆ ಒಮ್ಮೆ ಯಲಬುರ್ಗಾದ ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ ಮಾತಿಗೆ ಖುಷಿಯಿಂದ ಸೈ ಅಂದಿದ್ರು !
ಅದು 2016 ಡಿಸೆಂಬರ್. ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮ ಅದು.
ಸಮಾರೋಪಕ್ಕೆ ಆಗಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿಯವರು ಅತಿಥಿ.
ಸಮಾರೋಪದ ವೇದಿಕೆಗೆ ಬಂದ ರಾಯರಡ್ಡಿಯವರು ಹಿಂದಿನ ಸಾಲಿನಲ್ಲಿ ಆಸೀನರಾದರು. ನಿರೂಪಕರು, ಸಂಘಟಕರು ವೇದಿಕೆಯ ಮೊದಲ ಸಾಲಿನಲ್ಲಿ ಆಸೀನರಾಗುವಂತೆ ಕೇಳಿಕೊಂಡರೂ ನೀರಾಕರಿಸಿದ ಬಸವರಾಜ ರಾಯರಡ್ಡಿ ' ಇದು ಸಾಹಿತ್ಯ ಸಮ್ಮೇಳನ. ನಾವು ರಾಜಕಾರಣಿಗಳು ಇಲ್ಲಿ ಪಾಲ್ಗೊಳ್ಳಬೇಕು. ಆದ್ರೆ ರಾಜಕಾರಣಿಗಳೇ ವೇದಿಕೆಯ ಮೇಲೆ ಮೆರೆಯಬಾರದು. ತಮ್ಮ ಪಾಳಿ ಬಂದಾಗ ಮಾತಾಡಿ ತಮ್ಮ ಜಾಗದಲ್ಲಿ ಕುಳಿತುಕೊಳ್ಳಬೇಕು ' ಅಂದರು.
ಈ ಮಾತಿಗೆ ಖುಷಿಯಾದ ಚಂಪಾರವರು ನಿಮ್ಮ ಮಾತಿಗೆ ನಮ್ಮ ಬೆಂಬಲ ಇದೆ ಅಂತ ಅಭಿನಂದಿಸಿದ್ದರು. ಈ ವಿಷಯವನ್ನು ಚಂಪಾ ರವರು ತಮ್ಮ 'ಸಂಕ್ರಮಣ' ಪತ್ರಿಕೆಯಲ್ಲಿ ಉಲ್ಲೇಖಿಸಿದ್ದರು.
* * * *
*ಚಂಪಾ ಅತ್ತರು*
ಅಂಜದೆ ಅಳುಕದೆ ತಮ್ಮ ವಿಚಾರಗಳನ್ನು ಬರೆಯುತ್ತಿದ್ದ, ಹೇಳುತ್ತಿದ್ದ ಚಂಪಾರ ಎದೆಗಾರಿಕೆಗೆ ಸರಿಸಾಟಿ ಯಾರೂ ಇಲ್ಲ.
ಅಂಥ ಧೈರ್ಯವಂತ ಚಂಪಾರವರು ನೂರಾರು ಜನರೆದುರು ವೇದಿಕೆ ಮೇಲೆ ಗಳಗಳನೆ ಅತ್ತಿದ್ದರು.
ಇವತ್ತಿಗೂ ನಮಗೆ ಗವಿಸಿದ್ದ ಎನ್.ಬಳ್ಳಾರಿಯವರ ನಿಧನ ನೆನಪಾದರೆ ಕೂಡಲೇ ನೆನಪಾಗುವುದು ಚಂಪಾ , ಕೊಪ್ಪಳದ ಸಾಹಿತ್ಯ ಭವನ ಮತ್ತು ಚುಟುಕು ಸಮ್ಮೇಳನ.
ಅದು 2004 ರ ಮಾರ್ಚ್ 14. ಆವತ್ತು ಕೊಪ್ಪಳದ ಸಾಹಿತ್ಯ ಭವನದಲ್ಲಿ ಚುಸಾಪದ ಹನುಮಂತಪ್ಪ ಅಂಡಗಿ ರಾಜ್ಯ ಮಟ್ಟದ 14 ನೇ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರು. ಸಮ್ಮೇಳನಾಧ್ಯಕ್ಷರಾಗಿ ಚಂಪಾರವರು ಇದ್ದರು.
ಅಷ್ಟೊತ್ತಿಗೆ ನಾಡಕವಿ ಗವಿಸಿದ್ದ ಬಳ್ಳಾರಿಯವರ ತೀವ್ರ ಅನಾರೋಗ್ಯ ನಾಡಿನ ಸಾಹಿತ್ಯ ವಲಯವನ್ನು ದುಃಖ ಮತ್ತು ಆತಂಕಕ್ಕೆ ದೂಡಿತ್ತು. ಸಮ್ಮೇಳನದ ಎರಡನೇ ದಿನ ಮುಂಜಾನೆ ಚಂಪಾರವರು ಕೊಪ್ಪಳದ ಅತ್ತಾರ್ ಗಲ್ಲಿಯಲ್ಲಿರುವ ಬಳ್ಳಾರಿಯವರ ಮನೆಗೆ ಹೋಗಿದ್ದರು. ಸಾಹಿತ್ಯ ಭವನದಲ್ಲಿ ಐದಾರು ನೂರು ಜನ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಬಂದ ಚಂಪಾರವರು ವೇದಿಕೆ ಏರಿ ಮೈಕ್ ಹಿಡಿದು 'ಗೆಳೆಯ ಗವಿಸಿದ್ದ ಬಳ್ಳಾರಿ.....' ಅಂದವರೆ ಮಾತು ನಿಂತು ಹೋದವು. ಚಂಪಾ ಕಣ್ಣೀರಾದರು. ಅತ್ತುಬಿಟ್ಟರು. ಅಳುತ್ತಲೇ ಇದ್ದರು. ಇಡೀ ಸಾಹಿತ್ಯ ಭವನ ಸ್ಥಬ್ದವಾಗಿ ದುಃಖದ ವಾತಾವರಣ ನಿರ್ಮಾಣ. ನಾಡಕವಿ ನಿಧನದ ಸುದ್ದಿ ಆವತ್ತು ಮೊದಲು ಹೇಳಿದವರು ಚಂಪಾ. ಇಂದು ನಾಡಕವಿಗಳು ಹಾಗೂ ಚಂಪಾ ನೆನಪು ಮಾತ್ರ.
* * * *
ಯಾರಿಗೂ ಅಂಜದ ಧೈರ್ಯವಂತರ ಹೃದಯದಲ್ಲಿ ಕೋಮಲ ಭಾವನೆಗಳಿಗೆ ಎಲ್ಲಿಯ ಸ್ಥಾನ ಅಂತ ಅಂದುಕೊಂಡವರೆ ಹೆಚ್ಚು.
ಬಂಡಾಯವನ್ನು ಬದುಕು ಮತ್ತು ಬರಹದಲ್ಲಿ ಕೊನೆವರೆಗೂ ಅನುಸರಿಸಿದ ಚಂಪಾರವರು ಭಾವಗೀತೆಯನ್ನೂ ಬರೆದಿದ್ದಾರೆ. ಅದು ಈ ನಾಡಿನ ಖ್ಯಾತ ಭಾವಗೀತೆಗಳಲ್ಲಿ ಒಂದಾಗಿದೆ. ಅದುವೇ - *ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವವಳು.....'*
ಚಂಪಾರವರ ಸಾಹಿತ್ಯಕ್ಕೆ ಸಿ.ಅಶ್ವಥ್ ರವರ ಸಂಗೀತ ಮತ್ತು ಗಾಯನದಿಂದ ಈ ಭಾವಗೀತೆ ಇಂದಿಗೂ ಕನ್ನಡಿಗರ ಹೃದಯದಲ್ಲಿ ಶಾಸ್ವತ ಸ್ಥಾನ ಪಡೆದಿದೆ.
* * * *
ಈ ಸಲದ ಸಂಕ್ರಮಣಕ್ಕೆ ನಾಲ್ಕು ದಿನ ಇದ್ದಾಗಲೇ 'ಸಂಕ್ರಮಣ' ದ ಸಾರಥಿ ಹೊರಟು ಹೋದ್ರು.
ಮನಸ್ಸಿಗೆ ತೀವ್ರ ಬೇಸರ.