ಕೊಪ್ಪಳ : ಕುಷ್ಟಗಿ ನಗರದ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ದೇವಸ್ಥಾನದ ಹತ್ತಿರ ಇಂದು (ಬುಧವಾರ) ಬೆಳಗ್ಗೆ ಆರೂವರೆ ಸುಮಾರಿಗೆ ಗಂಡು ನವಜಾತ ಶಿಶು ಪತ್ತೆಯಾಗಿದೆ.
ಕುಷ್ಟಗಿಯಿಂದ ಹೊಸಪೇಟೆ ಕಡೆ ಸಾಗುವ ಹೆದ್ದಾರಿ ಪಕ್ಕ ಇರುವ ಶ್ರೀ ತಾಯಮ್ಮದೇವಿ ದೇವಸ್ಥಾನದ ಹತ್ತಿರ ನವಜಾತ ಶಿಶು ಅನಾಥವಾಗಿ ಕಂಡು ಬಂದಿದೆ.
ದೇವಸ್ಥಾನದ ಸುತ್ತಲಿನ ಜಮೀನುಗಳ ರೈತರು ಕೂಡಲೇ ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿಗೆ ಫೋನ್ ಮಾಡಿ ನವಜಾತ ಶಿಶು ಪತ್ತೆ ವಿಷಯ ತಿಳಿಸಿದ್ದಾರೆ.
ನಂತರ ಎಎಸ್ಐ ಭರಮಪ್ಪ ಹಾಗೂ ಹೆದ್ದಾರಿ ಗಸ್ತು ವಾಹನ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಂಡು ನವಜಾತ ಶಿಶು ರಕ್ಷಣೆ ಮಾಡಿ ತಮ್ಮ ವಾಹನದಲ್ಲಿ ಕರೆದೊಯ್ದು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಂದಾಜು 6 ರಿಂದ 8 ದಿನದ ನವಜಾತ ಗಂಡು ಶಿಶು ಇದಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ವೇಳೆ ಶಿಶುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿ ಉಷ್ಣಾಂಶ ತೀರಾ ಕಡಿಮೆ ಇತ್ತು. ಕೂಡಲೇ ವೈದ್ಯರು ಶಿಶುವನ್ನು ವಾರ್ಮರ್ ರೂಮಿನಲ್ಲಿರಿಸಿ ಅಗತ್ಯ ಲಸಿಕೆ, ಪೌಷ್ಟಿಕಾಂಶ ನೀಡಿ ಔಷೋಧೋಪಚಾರ ಮಾಡಿದ್ದಾರೆ.
ತೀರ ಬಳಲಿದ್ದ ಶಿಶುವಿಗೆ ಚೈತನ್ಯ ಬರಲು ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ತಾಯಿಯೊಬ್ಬರು ವಿನಂತಿ ಮೇರೆಗೆ ಶಿಶುವಿಗೆ ಎದೆ ಹಾಲುಣಿಸಿದ್ದಾರೆ.
ಶಿಶು ಅಪಾಯದಿಂದ ಪಾರಾಗಿದ್ದು ಕುಷ್ಟಗಿ ಆಸ್ಪತ್ರೆಯ ಮುಖ್ಯಸ್ಥರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಚಿಕ್ಕಮಕ್ಕಳ ರಕ್ಷಣಾ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ಮಹಾಂತೇಶ ತಿಳಿಸಿದ್ದಾರೆ.