ಕೊಪ್ಪಳ : ಬಿಜೆಪಿಯವರಿಗೆ ಕೆಲಸ ಇಲ್ಲ ಅವರು ನಿರುದ್ಯೋಗಿಗಳಾಗಿದ್ದಾರೆ. ಐದು ಗ್ಯಾರಂಟಿಗಳಿಂದ ರಾಜ್ಯದ ಜನ ಆರಾಮವಾಗಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಜನರ ಮನಸ್ಸನ್ನು ಕೆಡಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಶನಿವಾರ ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ ಕುರಿತು ಮಾತನಾಡಿದ ತಂಗಡಗಿ ಬಿಜೆಪಿಯವರು ವಿರೋಧ ಪಕ್ಷವಾಗಿ ಸರ್ಕಾರದ ತಪ್ಪುಗಳನ್ನು ತೋರಿಸಲಿ. ಎಲ್ಲಿ ಯಾರಿಗೆ ಅಭಿವೃದ್ಧಿ ಕಾರ್ಯಗಳು ತಲುಪಿಲ್ಲ ಅದನ್ನು ಹೇಳಲಿ. ಅದು ಬಿಟ್ಟು ಅವರು ರಾಜೀನಾಮೆ ಕೊಡಬೇಕು ಇವರು ರಾಜೀನಾಮೆ ಕೊಡಬೇಕು ಅಂದ್ರೆ ಸಾಧ್ಯವೇ ? ಗುತ್ತಿಗೆದಾರ ಸಚಿನ್ ಸಾವು ನಮಗೂ ನೋವು ತಂದಿದೆ. ಆ ಘಟನೆಯ ಸತ್ಯ ತನಿಖೆಯಾಗಿ ಹೊರ ಬರಲಿದೆ.
ಯಡಿಯೂರಪ್ಪನವರ ಮೇಲೆ ಪೋಕ್ಸೋ ಕೇಸ್ ಇದೆ, ಮುನಿರತ್ನ ಏಡ್ಸ್ ಸೂಜಿ ಚುಚ್ಚಿಸಿದ ಆರೋಪ ಇದೆ. ಅವರ ತಟ್ಟೆಯಲ್ಲಿ ಕತ್ತೆ ಸತ್ತಿದೆ ಮಂದಿ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ ಎಂದ ಅವರು ಸಚಿವ ಸಂಪುಟ ಪುನರ್ ರಚನೆ ಕುರಿತ ಪ್ರಶ್ನೆಗೆ ಅದು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.