ಕೊಪ್ಪಳ : ಮನುಷ್ಯ ತನ್ನೊಳಗಿನ ರಾಕ್ಷಸ ಪ್ರವೃತ್ತಿ ಸಂಹಾರ ಮಾಡಿಕೊಳ್ಳಲು ಒಂದೆರಡು ದಿನ ಸಾಲದು ಅದಕ್ಕೆ ನವ ದಿನಗಳ ಕಾಲ ಈ ಹಬ್ಬ ಆಚರಿಸುತ್ತೇವೆ. ಶಿವನಿಂದ ಶಕ್ತಿ ಪಡೆದವರೇ ಈ ನವದುರ್ಗೆಯರು ಶಿವಶಕ್ತಿಯರು. ನಾವು ಕೂಡ ಅಸುರಿ ಗುಣಗಳ ಮೇಲೆ ವಿಜಯ ಸಾಧಿಸಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವುದೇ ನವರಾತ್ರಿ ಹಬ್ಬ ಆಚರಣೆ ಮುಖ್ಯ ಉದ್ದೇಶ ಎಂದು ಬ್ರಹ್ಮ ಕುಮಾರಿ ಯೋಗಿನಿ ಅಕ್ಕ ನುಡಿದರು.
ಅವರು ವಾಸವಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಏರ್ಪಡಿಸಿದ್ದ ನವರಾತ್ರಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ತನ್ನ ಸಿಟ್ಟು, ದ್ವೇಷ, ಅಸೂಯೆ, ಅಹಂಕಾರಗಳನ್ನು ಸಂಹರಿಸಿಕೊಂಡು ಶಾಂತಿ ಸಮಾಧಾನ ಹಸನ್ಮುಖತೆಯಂಥ ಗುಣ ಧಾರಣೆಯೂ ದಸರಾ ಆಚರಣೆ ಮುಖ್ಯ ಉದ್ದೇಶ ಎಂದ ಅವರು ದಸರಾ ಪ್ರಯುಕ್ತ "ಮನಶಾಂತಿಗಾಗಿ ಶಿವಧ್ಯಾನ ಶಿಬಿರ" ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 7 ರಿಂದ 8 ವರೆಗೆ ಏರ್ಪಡಿಸಿದ್ದು ಲಾಭ ಪಡೆಯುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ "ಚೈತನ್ಯ ದೇವಿಯ ರೂಪಕ" ಜನರನ್ನು ಆಕರ್ಷಿಸಿತು.
ವೇದಿಕೆಯಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಉಪಾಧ್ಯಕ್ಷರಾದ ನಾರಾಯಣ ಕುರುಗೋಡು ಕಾರ್ಯದರ್ಶಿ ಮಲ್ಲಿಕಾರ್ಜುನ್ ಜಾನೆಕಲ್, ಶಂಕರ್ ಜನಾದ್ರಿ ಮುಂತಾದವರು ಉಪಸ್ಥಿತರಿದ್ದರು.