‘ಸಾಧನೆ ಸಾಧಕನ ಸ್ವತ್ತು' ಅಕ್ಷರಶಃ ಈ ಮಾತು ನಿಜ. ಯಶಸ್ಸು ಪಡೆಯಲು ಕಠಿಣ ಪರಿಶ್ರಮ ಅವಶ್ಯಕ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದು, ಯಶಸ್ವಿ ವ್ಯಕ್ತಿಯಾಗಲು ಹಲವು ವರ್ಷಗಳವರೆಗೆ ತಾಳ್ಮೆ ಅತೀ ಮುಖ್ಯ. ಸಾಧನೆಯೆಂಬ ಶಿಖರ ತಲುಪಲು ಇದೋ ಸಪ್ತ ಸೂತ್ರಗಳು. ಇವುಗಳನ್ನು ಅಳವಡಿಸಿಕೊಂಡು ಯಶಸ್ವಿ ವ್ಯಕ್ತಿಗಳಾಗೋಣ. ಏನು ಈ ಈ ಸಪ್ತ ಸೂತ್ರಗಳು ? ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಸ್ವಪ್ರೇರಣೆ:
ಯಾವುದೇ ಒಂದು ಕಾರ್ಯ ನಡೆಯಬೇಕಾದರೆ ಅದಕ್ಕೆ ಪ್ರೇರಣೆ ಅವಶ್ಯಕ. ಅದು ಬಾಹ್ಯವಾಗಿ ಪಡೆಯುವುದು ಜನಸಾಮಾನ್ಯರ ಅಭ್ಯಾಸ. ಆದರೆ ಸ್ಪೂರ್ತಿದಾಯಕ ನುಡಿ,ಚಿತ್ರಗಳಿಂದ ಸಿಗುವ ಉತ್ಸಾಹ ,ಪ್ರೇರಣೆ ತಾತ್ಕಾಲಿಕ. ಆದರೆ ಸ್ವಪ್ರೇರಣೆ ಶಾಶ್ವತವಾಗಿ ಮನದಲ್ಲಿ ನೆಲೆಯೂರಿ ಪ್ರತಿಕ್ಷಣವು ನಮ್ಮನ್ನು ಜಾಗೃತರಾಗಿರುವಂತೆ ಮಾಡುತ್ತದೆ. ಆದ್ದರಿಂದ ಸಾಧನೆ ಮಾಡುವವರಿಗೆ ಇದು ಮೊದಲ ಸೂತ್ರವೆಂದರೆ ಅತಿಶಯೋಕ್ತಿಯೇನಲ್ಲ.
ಪ್ರಯತ್ನ:
“ಪ್ರಾಕ್ಟಿಸ್ ಮೇಕ್ಸ್ ಮ್ಯಾನ್ ಪರ್ಪೇಕ್ಟ್” ಎಂಬ ಆಂಗ್ಲ ಮಾತೊಂದು ಪ್ರಯತ್ನದ ಪ್ರಾಮುಖ್ಯತೆಯನ್ನು ಅತ್ಯಂತ ಅರ್ಥಗರ್ಭಿತವಾಗಿ ತಿಳಿಸುತ್ತದೆ. ಪ್ರಯತ್ನವಿಲ್ಲದೆ ಸಾಧನೆ ಅಸಾಧ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಥಾಮಸ್ ಅಲ್ವಾ ಎಡಿಸನ್ .ಅವರ ಅನೇಕ ವಿಫಲ ಪ್ರಯತ್ನಗಳ ಫಲವೇ ಬಲ್ಬ್ ಆವಿಷ್ಕಾರ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರಯತ್ನ ಬೇಕೆ ಬೇಕು. ಅದಕ್ಕಾಗಿ ಸಾಧನೆಗೆ ಬೇಕಾದ ಸೂತ್ರಗಳಲ್ಲಿ ಪ್ರಯತ್ನಕ್ಕೆ ಎರಡನೇ ಸ್ಥಾನ. ಮತ್ತೇಕೆ ತಡ ನೀವು ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರಯತ್ನಿಸಿ.
ತಾಳ್ಮೆ:
ಸಾಧಿಸಬೇಕು ಎಂದವರಿಗೆ ತಾಳ್ಮೆ ಇರಲೇಬೇಕು. ಏಕೆಂದರೆ ಯಶಸ್ಸು ಅಥವಾ ಸಾಧನೆಯೆಂಬುದು ರಾತ್ರೋರಾತ್ರಿ ನಡೆಯುವ ಪವಾಡವಲ್ಲ. ಅದಕ್ಕೆ ತುಂಬಾ ದಿನಗಳ ಶ್ರಮ, ಶ್ರದ್ಧೆ ಬೇಕು. ಇವುಗಳನ್ನು ಮೈಗೂಡಿಸಿಕೊಂಡರೆ ಬಹುಕಾಲದ ನಂತರ ಯಶಸ್ಸು ಸಿದ್ಧಿಸಲು ಸಾಧ್ಯ. ಇದರಲ್ಲಿ ತಾಳ್ಮೆಯ ಪಾತ್ರ ಮಹತ್ವದ್ದು. ಅದಕ್ಕಾಗಿ ಸಾಧನೆಗೆ ಸಪ್ತಾಂಗ ಸೂತ್ರದಲ್ಲಿ ತಾಳ್ಮೆ ಸ್ಥಾನ ಪಡೆದಿದೆ.
ಕಠಿಣ ಪರಿಶ್ರಮ:
ಅವಿರತ ಶ್ರಮ,ಶ್ರದ್ಧೆಯಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಇದರ ಹೊರತು ಯಾವುದೇ ಅಡ್ಡ ಅಥವಾ ವಾಮ ಮಾರ್ಗವಿಲ್ಲ.ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೆ ಆದರೆ ಸಾಧನೆ ಸಿದ್ದಿಸುತ್ತದೆ.
ಮಾರ್ಗದರ್ಶಕ: ಸಾಧನೆಯ ರಹದಾರಿಯಲ್ಲಿ ನಡೆಯಲು ಮಾರ್ಗದರ್ಶಕರೊಬ್ಬರು ಇರಲೇಬೇಕು. ಅದು ನಿಮ್ಮ ತಾಯಿ-ತಂದೆ ಆಗಿರಬಹುದು, ಒಡಹುಟ್ಟಿದವರಾಗಿರಬಹುದು ಅಥವಾ ಶಿಕ್ಷಣ ನೀಡುವ ಶಿಕ್ಷಕರಾದರೂ ಆಗಿರಬಹುದು. ಒಟ್ಟಾರೆ ಸಾಧನೆಯ ಪಥದಲ್ಲಿ ಸಾಗುವ ಪ್ರತಿಯೋರ್ವರಿಗೂ ಮಾರ್ಗದರ್ಶಕರ ಅವಶ್ಯಕತೆ ಬಹುಮುಖ್ಯ.
ನಿಂದಕರಿರಲಿ:
ನಮ್ಮ ಪ್ರತಿ ಹೆಜ್ಜೆಯಲ್ಲೂ ತಪ್ಪು ಕಂಡು ಹಿಡಿಯುವ ನಮ್ಮ ಕಾರ್ಯದಲ್ಲಿ ದೋಷ ಹುಡುಕುವ ವರ್ಗವೊಂದಿರಲೇಬೇಕು. ಆಗಲೇ ನಾವು ಜವಾಬ್ದಾರಿಯಿಂದಿರಲು ಜೀವನ ನಡೆಸಲು, ಮುನ್ನೆಡೆಯಲು ಸಾಧ್ಯವಾಗುವುದು.
ಸದ್ವಿಚಾರಗಳಿರಲಿ:
ಪ್ರತಿ ವಿಚಾರವು ಸಕರಾತ್ಮಗಿರಲಿ ಆಗ ಸಾಧನೆ ಎಂಬುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸದ್ವಿಚಾರಗಳು ವ್ಯಕ್ತಿಯ ವ್ಯಕ್ತಿತ್ವ ರೂಪಿಸಿ ಸಾಧನೆಯಡೆಗೆ ಕೊಂಡ್ಯೊಯುತ್ತವೆ.ಆದ್ದರಿಂದ ಸದಾ ಸದ್ವಿಚಾರಶೀಲರಾಗಿರಿ.
ಸಾಧನೆಗೆ ಮಿತಿಯಂಬುದಿಲ್ಲ. ಅದು ಜಾತಿ-ಮತ, ವರ್ಣ, ಲಿಂಗಗಳ ಎಲ್ಲೆ ಮೀರಿದ್ದು. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧಕರಾಗಬಹುದು. ಆದರೆ ಮನಸ್ಸು ಮಾಡಬೇಕಷ್ಟೇ. ಆ ಮನಸ್ಸು ನಿಮ್ಮದಾಗಲೆಂದು ಹಾರೈಸುವೆ.
ಸುರೇಶ ತಂಗೋಡ
ಕೊಪ್ಪಳ-583231