ಕೊಪ್ಪಳ: ರಾಜ್ಯ ಸರಕಾರ ದುರಾಡಳಿತ ನಡೆಸುತ್ತಿದೆ. ಆರ್ಥಿಕ ಸ್ಥಿತಿ ಹದಗೆಟ್ಟು ಬೆಲೆ ಏರಿಕೆ ಮೂಲಕ ಜನರ ಬದುಕಿಗೆ ಬರೆ ಎಳೆಯುತ್ತಿರುವ ಜನವಿರೋಧಿ ಸಿದ್ದರಾಮಯ್ಯ ಸರಕಾರ ವಜಾಗೊಳಿಸುವಂತೆ ಜೆಡಿಎಸ್ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಜೆಡಿ (ಎಸ್ ) ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ , ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ , ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ ಹಾಗೂ ಇತರರ ನೇತೃತ್ವದಲ್ಲಿ ಬನ್ನಿಕಟ್ಟಿಯಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸಿ.ವಿ.ಚಂದ್ರಶೇಖರ - ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ 14 ತಿಂಗಳಲ್ಲಿ ಸಾಮಾನ್ಯರ ಬದುಕು ದುಸ್ತರ ಮಾಡಿದೆ. ಕರೆಂಟ್ ಬಿಲ್ ಡಬಲ್ ಆಗಿದೆ. ತೈಲ ಬೆಲೆ ಗಗನಕ್ಕೇರಿದೆ. ಹಾಲಿನ ಬೆಲೆ ಹೆಚ್ಚಾಗಿದೆ. ಬಿತ್ತನೆ ಬೀಜದ ದರ ಏರಿದೆ. ಇದನ್ನು ಮಾಡುವುದಕ್ಕಾಗಿಯೇ ಜನ ನಿಮಗೆ 136 ಸೀಟ್ ಕೊಟ್ಟರೆ ? ಎಂದು ಪ್ರಶ್ನಿಸಿದರು.
15 ಸಲ ಬಜೆಟ್ ಮಂಡನೆ ಮಾಡಿದ ಆರ್ಥಿಕ ತಜ್ಞ ಎಂದು ಬೆನ್ನು ತಟ್ಟಿಸಿಕೊಳ್ಳುವ ಸಿದ್ದರಾಮಯ್ಯ ಆಡಳಿತ ಅಂದ್ರೆ
ಬಡವರಿಗೆ ಉಚಿತವಾಗಿ ಕೊಟ್ಟೆ ಎನ್ನುತ್ತ ಬೆಲೆ ಏರಿಸಿ ಕೊಟ್ಟ ಹಣ ಕಿತ್ತುಕೊಳ್ಳೊದು. ಎಲ್ಲ ಬಸ್ ನಿಲ್ದಾಣ ನೋಡಿ ಪ್ರಯಾಣಿಕರ ಸ್ಥಿತಿ ಅದೆಷ್ಟು ಹದಗೆಟ್ಟಿದೆ ಅಂತ ಎಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದೆ. ಅದರ ಬಗ್ಗೆ ಸಿ.ಎಂ. ಹಾಗೂ ಡಿ.ಸಿ.ಎಂ. ಅವರಿಗೂ ಮಾಹಿತಿ ಇತ್ತು. ದಲಿತರ ಬಗ್ಗೆ ಇವರದು ಬರೀ ಮೊಸಳೆ ಕಣ್ಣೀರು. ಮುಖ್ಯಮಂತ್ರಿಗೆ ಡಜನ್ ಸಲಹೆಗಾರರು ಇದ್ದಾರೆ. ಅವರಿಗೆ ಗೂಟದ ಕಾರು, ಕ್ಯಾಬಿನೆಟ್ ದರ್ಜೆ. ಸಿದ್ದರಾಮಯ್ಯನವರೆ ಇದು ಸಮಾಜವಾದ ಆಡಳಿತದ ವೈಖರಿಯೆ ? ಎಂದು ಸುರೇಶ್ ಭೂಮರೆಡ್ಡಿ ಟೀಕಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ದೇವಪ್ಪ ಕಟ್ಟಿಮನಿ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಈಶಪ್ಪ ಮಾದಿನೂರು, ಶರಣಪ್ಪ ಕುಂಬಾರ, ಯಮನಪ್ಪ ಕಟಗಿ, ಬಸವರಾಜ್ ಗುರುಗುಳಿ, ಕೆಂಚಪ್ಪ ಹಳ್ಳಿ, ಕೃಷ್ಣ ನಾಯಕ್, ವಸಂತ ಕರಿಗಾರ್, ಭೀಮರೆಡ್ಡಿ ಗದ್ದಿಕೇರಿ, ಜಗನ್ನಾಥ್ ರೆಡ್ಡಿ, ಚಿಕ್ಕ ವೀರಣ್ಣ, ರಮೇಶ ಕುಣಿಕೇರಿ, ಹುಚ್ಚಪ್ಪ ಚೌದ್ರಿ, ಕರಿಯಪ್ಪ ಹಾಲವರ್ತಿ, ಆನಂದ ಕಾಸನಕಂಡಿ, ಜಗನ್ನಾಥ ಮುನಿರಾಬಾದ್, ಕಳಕನಗೌಡ ಹಲಗೇರಿ, ಶರಣಪ್ಪ ರಾಂಪುರ, ಮೌನೇಶ ಮಾದಿನೂರ, ಪ್ರವೀಣ ಇಟಗಿ, ಶರಣು ಪಾಟೀಲ, ಮೂರ್ತ್ಯಪ್ಪ ಹಿಟ್ನಾಳ, ರುದ್ರೇಶ ಕೊಪ್ಪಳ, ಮಂಜುನಾಥ ಕುಣಿಕೇರಿ ಸೇರಿದಂತೆ ಪಕ್ಷದ ನೂರಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.