ಕೊಪ್ಪಳ : ಅದು ಕೆಲವೇ ನೂರು ಮನೆಗಳ ಗ್ರಾಮ. ಪ್ರತಿ ವರ್ಷ ಮೃಗಶಿರ ಮಳೆ ಆರಂಭದ ದಿನ 50-60 ಸಾವಿರ ಜನ ಸೇರುತ್ತಾರೆ. ಆವತ್ತು ಗ್ರಾಮದಲ್ಲಿ ಧಾರ್ಮಿಕ ಉತ್ಸವ , ಜಾತ್ರೆ ಇರಲ್ಲ. ಆದರೆ ಜನ ಜಾತ್ರೆ ಅಂತಾರಲ್ಲ ಹಾಗೆ ಜನ ಸೇರಿರುತ್ತಾರೆ. ಕರ್ನಾಟಕ ಆಂಧ್ರ ತೆಲಂಗಾಣ ಮಹಾರಾಷ್ಟ್ರದಿಂದ ಜನ ಬರುತ್ತಾರೆ.
ಕಾರಣ ಅಸ್ತಮಾ ಔಷಧಿ.
ಇದು ಇಲ್ಲಿಂದ 10 ಕಿ.ಮೀ ದೂರ ಇರುವ ಕುಟುಗನಹಳ್ಳಿಯ ಕತೆ. ಹಾಗಂತ ಇಲ್ಲಿ ಅಸ್ತಮಾದ ಯಾವುದೇ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಇಲ್ಲ. ಬದಲಾಗಿ ಪಾರಂಪರಿಕವಾಗಿ ಅಸ್ತಮಾ ಔಷಧಿ ಕೊಡುತ್ತಾರೆ ಅಶೋಕರಾವ್. ಅದೂ ಪ್ರತಿ ವರ್ಷ ಮೃಗಶಿರ ಮಳೆ ಆರಂಭದ ಹೊತ್ತಿಗೆ ಈ ಔಷಧಿ ಸೇವಿಸಬೇಕು.
ಈ ವರ್ಷ ಜೂನ್ 8 ಬೆಳಗ್ಗೆ ಏಳೂವರೆ ಹೊತ್ತಿಗೆ ಸೇರಿದ್ದ ಸುಮಾರು 60 ಸಾವಿರ ಜನ ಈ ಔಷಧಿ ಪಡೆದುಕೊಂಡರು.
ಈ ಗ್ರಾಮದ ವ್ಯಾಸರಾವ್ ಕುಲಕರ್ಣಿ ಎಂಬುವವರು ಪ್ರತಿ ವರ್ಷ ಮೃಗಶಿರ ಮಳೆ ಆರಂಭದ ಹೊತ್ತಿಗೆ ಅಸ್ತಮಾಗೆ ಔಷಧಿ ಕೊಡುತ್ತಿದ್ದರು. ಈಗ ಅವರ ಪುತ್ರ ಅಶೋಕ ರಾವ್ ಈ ಕಾರ್ಯ ಮಾಡುತ್ತಿದ್ದಾರೆ.
ಔಷಧಿಗಾಗಿ ಜೂನ್ 7 ಬೆಳಗ್ಗೆಯಿಂದ ಜನ ಬಂದು ಗ್ರಾಮದ ಬಯಲು ಜಾಗೆಯಲ್ಲಿ ತಮ್ಮ ಜಾಗ ಕಾಯ್ದಿರಿಸಿದರು. ಜೂನ್ 8 ರ ಬೆಳಗಿನ ಜಾವ 4 ರ ಸುಮಾರಿಗೆ ಅಶೋಕರಾವ್ ಗುಳಿಗೆ ರೂಪದ ಔಷಧಿ ವಿತರಿಸಿದರು. ಬೆಳಗ್ಗೆ 7.47 ಕ್ಕೆ ಸಾವಿರಾರು ಜನ ಏಕಕಾಲಕ್ಕೆ ಔಷಧಿ ಸೇವಿಸಿದರು. ಆಸ್ಪತ್ರೆಯಲ್ಲಿ ಗುಣಮುಖರಾಗದೆ ಇಲ್ಲಿ ಬಂದು ಔಷಧಿ ಪಡೆದ ಮೇಲೆ ಅಸ್ತಮಾ ಕಡಿಮೆ ಆಗಿದೆ, ಪೂರ್ತಿ ಹೋಗಿದೆ ಎಂಬ ಅಭಿಪ್ರಾಯ ಕೆಲವರು ವ್ಯಕ್ತಪಡಿಸಿದರು.
ಬಂದಿದ್ದ ಸಾವಿರಾರು ಜನಕ್ಕೆ ರಾಯಚೂರಿನ ಶಿವಯ್ಯ ಶೆಟ್ಟಿ ಕುಟುಂಬ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಇವರು ಪ್ರತಿ ವರ್ಷ ಇಲ್ಲಿ ಇದೇ ಸಂದರ್ಭದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡುತ್ತಾರೆ.