ಕೊಪ್ಪಳ : 2004 ರ ನಂತರ 2024 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ 46 ಸಾವಿರ ಮತಗಳಿಂದ ಗೆದ್ದಿದೆ. ಈ ಲೀಡ್ ನಲ್ಲಿ ಮಸ್ಕಿ , ಗಂಗಾವತಿ ಪಾಲು 36 ಸಾವಿರ ಇದೆ. ಕೊಪ್ಪಳ ಜಿಲ್ಲೆಯ ಮಟ್ಟಿಗೆ ಇಕ್ಬಾಲ್ ಅನ್ಸಾರಿಯವರ ಗಂಗಾವತಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದ್ರೆ 15 ಸಾವಿರ ಮತಗಳ ಲೀಡ್ ಕಾಂಗ್ರೆಸ್ ಗೆ ಬಂದಿದೆ.
ಎರಡು ಸಲವೂ ಅನ್ಸಾರಿ ಸೋಲಿಗೆ ಕಾಂಗ್ರೆಸ್ ನವರೆ ಕಾರಣ ಎಂಬ ನಂಬಿಕೆ ಜಿಲ್ಲೆ ಮತ್ತು ಸಿಂಧನೂರಿನ ಅಲ್ಪಸಂಖ್ಯಾತರಲ್ಲಿ ಇದೆ. ಹಾಗಾಗಿ ಚುನಾವಣಾ ಸಮೀಕ್ಷೆಯಲ್ಲಿ ಇದೇ ಕೇಂದ್ರ ಬಿಂದು ಆಗಿತ್ತು. ಮತದಾನಕ್ಕೆ ಎರಡು ದಿನ ಮುಂಚೆ ಜಿಲ್ಲೆ ಮತ್ತು ಸಿಂಧನೂರಿನ ಅಲ್ಪಸಂಖ್ಯಾತರನ್ನು ಲೋಕಲ್ ವಿಷಯ ಈಗ ಬೇಡ ನ್ಯಾಷನಲ್ ನೋಡಿ ಅಂತ ಕಾಂಗ್ರೆಸ್ ನತ್ತ ಮನವೊಲಿಸಿದ ಅನ್ಸಾರಿ ನಡೆ ಕಾಂಗ್ರೆಸ್ ಗೆಲುವಿನ ದಡ ಸೇರಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಅತಿ ಹೆಚ್ಚು ಕೌಂಟರ್ ಕಾಮೆಂಟರಿ ಕೊಟ್ಟರು. ಆದರೆ ಕನಕಗಿರಿ ಕ್ಷೇತ್ರದಲ್ಲಿ ಕೇವಲ 4 ಸಾವಿರ ಮತಗಳ ಲೀಡ್ ಕಾಂಗ್ರೆಸ್ ಗೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲರು ಕುಷ್ಟಗಿಯಲ್ಲಿ ಬಿಜೆಪಿ ಲೀಡ್ ಆಗಿ ಮುಖಭಂಗ ಅನುಭವಿಸಿದ್ದಾರೆ. ಮಂತ್ರಿಗಿರಿ ಸಿಗದಿದ್ದರೂ ಆರ್ಥಿಕ ಸಲಹೆಗಾರ ಹುದ್ದೆ ಪಡಕೊಂಡ ಬಸವರಾಜ ರಾಯರಡ್ಡಿಯವರ ಯಲಬುರ್ಗಾ ಕ್ಷೇತ್ರದಲ್ಲಿ ಕೇವಲ 2 ಸಾವಿರ ಲೀಡ್ ಕಾಂಗ್ರೆಸ್ ಗೆ.
ಎರಡು ಸಲ ಸಂಸದರಾಗಿದ್ದ ಸಂಗಣ್ಣ ಕರಡಿ, ಹಾಲಿ ಎಮ್ಮೆಲ್ಲೆ ರಾಘವೇಂದ್ರ ಹಿಟ್ನಾಳ, ಲೋಕಸಭೆ ಕ್ಯಾಂಡಿಡೇಟ್ ರಾಜಶೇಖರ ಹಿಟ್ನಾಳರ ಸ್ವಕ್ಷೇತ್ರ ಕೊಪ್ಪಳದಲ್ಲಿ ಕಾಂಗ್ರೆಸ್ ಕೇವಲ 7 ಸಾವಿರ ಲೀಡ್ ಪಡೆದಿದ್ದು ಮೂವರಿಗೂ ಮುಖಭಂಗ ಆಗಿದೆ.
ಬಿಜೆಪಿ ಹೊಸ ಮುಖ ಕಣಕ್ಕಿಳಿಸಿದಾಗ, ಸಂಗಣ್ಣ ಕರಡಿಯಂಥ ಮಾಸ್ ಇಮೇಜ್ ಲೀಡರ್ ಪಕ್ಷ ಬಿಟ್ಟಾಗಲೂ ಬಿಜೆಪಿ ಕೊಪ್ಪಳದಲ್ಲಿ 91 ಸಾವಿರ ಮತ ಪಡೆದಿರುವುದು ಸಾಧನೆಯೇ ! ಸಂಗಣ್ಣ ಕರಡಿ ಕಾಂಗ್ರೆಸ್ ಗೆ ಎಂಟ್ರಿ ಆದಾಗ ಕೊಪ್ಪಳದಲ್ಲಿ 50-60 ಸಾವಿರ ಲೀಡ್ ಎಂಬ ಲೆಕ್ಕಾಚಾರ ಕಾಂಗ್ರೆಸ್ ನಲ್ಲಿತ್ತು.
ಸಂಗಣ್ಣ ಕರಡಿ ಕಾಂಗ್ರೆಸ್ ಗೆ ಎಂಟ್ರಿ ಆಗಿದ್ದಕ್ಕೆ ಕೊಪ್ಪಳದಲ್ಲಿ ಕಾಂಗ್ರೆಸ್ ಲೀಡ್ ಆಗಲು ಕಾರಣ ಎಂಬ ವಾದ ಕರಡಿ ಬೆಂಬಲಿಗರದು. 2019 ರಲ್ಲಿ ರಾಜಶೇಖರ ಹಿಟ್ನಾಳ ಕೊಪ್ಪಳದಲ್ಲಿ 12 ಸಾವಿರ ಮತಗಳಿಂದ ಹಿಂದೆ ಇದ್ರು. ಅದು ಮೀರಿ ಈಗ 7 ಸಾವಿರ ಲೀಡ್ ಅಂದ್ರೆ 19 ಸಾವಿರ ಮತ ಕರಡಿ ಪ್ರಭಾವದ್ದು ಎಂಬ ವಾದ ಅವರದ್ದು.
ಈ ಸಲದ ಚುನಾವಣೆ ವಿಶೇಷ ಅಂದ್ರೆ ಸೋತಿರುವ ಇಕ್ಬಾಲ್ ಅನ್ಸಾರಿ , ಟಿಕೆಟ್ ತಪ್ಪಿರುವ ಸಂಗಣ್ಣ ಕರಡಿ ಇಬ್ಬರೇ ಹೆಚ್ಚು ಕೇಂದ್ರೀಕೃತ ಆಗಿದ್ರು. ಚುನಾವಣೆ ಚರ್ಚೆ, ಸಮೀಕ್ಷೆ ಸಂದರ್ಭದಲ್ಲಿ ಇವರಿಬ್ಬರ ಹೆಸರಿಲ್ಲದ ಅದು ಮುಂದೆ ಸಾಗುತ್ತಿರಲಿಲ್ಲ.
ಮತ ಎಣಿಕೆ ನಂತರದ ಚರ್ಚೆ ಅಂದ್ರೆ ಈ ಸಲದ ಕಾಂಗ್ರೆಸ್ ಗೆಲುವಿಗೆ ಕೊಪ್ಪಳ ಜಿಲ್ಲೆ ಮಟ್ಟಿಗೆ ಮ್ಯಾನ್ ಆಫ್ ಮ್ಯಾಚ್ ಇಕ್ಬಾಲ್ ಅನ್ಸಾರಿ - ಸಂಗಣ್ಣ ಕರಡಿ ಇಬ್ಬರಲ್ಲಿ ಯಾರಿಗೆ ?