ಕೊಪ್ಪಳ : ಶಕ್ತಿ ದೇವತೆ ಶ್ರೀ ಹುಲಿಗೆಮ್ಮ ಜಾತ್ರೆ ನಿಮಿತ್ತ ಶುಕ್ರವಾರ ಸಂಜೆ ಸಂಭ್ರಮ ಭಕ್ತಿಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ನೆರೆದಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ ರಥೋತ್ಸವ ಸಂದರ್ಭದಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಜಾತ್ರೆಗೆ ಸಾಂಸ್ಕೃತಿಕ ಮೆರುಗು ನೀಡಿದವು.
ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು, ಹುಲಿಗೆಮ್ಮ ದೇವಿಗೆ ಭಕ್ತಿಯ ಜೈಕಾರ ಹಾಕಿ ಪುನಿತರಾದರು. ಪ್ರತಿವರ್ಷ ವೈಶಾಖ ನವಮಿಯ ದಿನ, ಹುಲಿಗೆಮ್ಮ ದೇವಿ ರಥೋತ್ಸವ ನಡೆಯುತ್ತದೆ. ಈ ವರ್ಷ ಕೂಡಾ ಶುಕ್ರವಾರ ಮೇ. 31 ರಂದು ಜರುಗಿದ ರಥೋತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕ ಅಲ್ಲದೆ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂದ್ರದಿಂದ ಬಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಜಾತ್ರೆ ನಿಮಿತ್ಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಜೂನ್ 3 ರವರಗೆ ನಡೆಯಲಿವೆ. ಜಾತಿ ಬೇಧ ಮರೆತು, ಸರ್ವಧರ್ಮಗಳ ಸಮನ್ವಯತೆಯೊಂದಿಗೆ ಭಕ್ತರು ಜಾತ್ರೆಯಲ್ಲಿ ಬಾಗಿಯಾಗಿದ್ದು ವಿಶೇಷವಾಗಿತ್ತು.