ಬಗೆಸಿ ನೋವನುಂಡಿಯಾಕ ಗೃಹಿಣಿ
ಹಡೆದರಷ್ಟೆ ಅಲ್ಲ ಜನನಿ..
ಸಕಲರನು ಪಡೆದಿಲ್ಲವೇ ಈ ಧರಣಿ..
ನಿನಗಿಂತಲೂ ಅವಳು ಕರುಣಿ...!!
ನಿನ್ನ ಹೊಟ್ಟೆಯೊಳಗಾಡಿದ ಕತ್ತರಿ
ನನ್ನ ಮನದೊಳು ಗಾಯ ಮಾಡಿತ್ತು
ದಿಗಿಲು ಬಿದ್ದ ಕಂಗಳಿಂದ ನೀರು ಜಾರದಾಗಿತ್ತು
ಕರುಳ ಬಳ್ಳಿಯ ಆಸೆಯ ಒರತೆ ಬರಿದಾಗಿತ್ತು...
ಹೊಕ್ಕಳ ಬಳ್ಳಿಗೆ ರಂಧ್ರವ ಕೊರೆದು
ಪಡೆವ ಸಂತಾನದಿ ಸುಖವಾದರೂ ಏನು?
ಚಂದಿರನ ಬೆಳಕಲಿ ನಲಿಯುವವು ಭುವಿಭಾನು
ಅದರಿಂತಿರೋಣ ನಾನು ನೀನು..
ಬಿರುನುಡಿಯ ಬಾಣಗಳು ಮಾಡಿದ ಗಾಯ
ಹೊಟ್ಟೆಯೊಳಗಾಡಿದ ಕತ್ತರಿಯೂ ಮಾಡಿಲ್ಲ
ಒತ್ತರಿಸುವ ದುಃಖಕೆ ನಿನ್ನ ಮುಗುಳ್ನಗೆಯೇ ಸುಂಕ
ದೇವರು ನಿರ್ಧರಿಸುವ ನಮ್ಮಬದುಕಿನ ಕ್ರಮಾಂಕ..
- ಮೌನೇಶ ಬಡಿಗೇರ, ಯತ್ನಟ್ಟಿ ಕೊಪ್ಪಳ