ಆಗಿನ್ನೂ ನಾನು ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವಾಗ ಅಪ್ಪ ಬಣ್ಣದ ಬುಗುರಿಯನ್ನು ಕೊಡಿಸಿದ್ದರು. ಅದಕ್ಕೆ ಹೊಡೆದಿದ್ದ ಮೊಳೆ ಹೆಚ್ಚು ಉದ್ದವಾಗಿದ್ದರಿಂದ ಅದು ಸರಿಯಾಗಿ ಆಡುತ್ತಿರಲಿಲ್ಲ. ಶಾಲೆ ಬಿಟ್ಟ ಮೇಲೆ ನಾನು ಮತ್ತು ಗೆಳೆಯ ರವೀಂದ್ರ ಹಿರೇಮನಿ ಇಬ್ಬರೂ ಸರಕಾರಿ ದವಾಖಾನೆ ಮುಂದೆಯಿಂದ ಹಾದು ಟೌನ್ ಪೊಲೀಸ್ ದಾಟಿ, ಹಸನ್ ರಸ್ತೆಯ ಮೂಲಕ ಆಝಾದ್ ಸರ್ಕಲ್, ಕಿತ್ತೂರು ಚನ್ನಮ್ಮ ಸರ್ಕಲ್ ಮೂಲಕ ಮನೆ ಸೇರುತ್ತಿದ್ದೆವು. ಅವತ್ತು ರವಿ ಬಂದಿರಲಿಲ್ಲ. ನಾನು ಬುಗುರಿಯನ್ನು ಕೈಯಿಂದ ಎಸೆಯುತ್ತಾ, ಆಡುತ್ತಾ ಬರುತ್ತಿದ್ದಾಗ ನನಗಿಂತಲೂ ಸ್ವಲ್ಪ ದೊಡ್ಡ ಹುಡುಗನೊಬ್ಬ ನನ್ನ ಬುಗುರಿಯನ್ನು ಹಿಡಿದುಕೊಂಡು “ಅಪ್ಪಿ ಮಳಿ ಬಡದು ಕೊಡ್ಲನು.. ಬುಗುರಿ ಚಲೋ ಆಡುತ್ತ..” ಎಂದ. ನಾನು “ಹೂಂ” ಎಂದೆ. ಆತ “ಅಲ್ಲಿ ದೊಡ್ಡ ಕಲ್ಲು ಐತೆಲ್ಲ ತಗೊಂಬಾ ಹೋಗು” ಎಂದು ದೂರದಲ್ಲಿದ್ದ ಕಲ್ಲನ್ನು ತೋರಿಸಿದ. ನಾನು ಉತ್ಸಾಹದಿಂದ ಕಲ್ಲನ್ನು ತೆಗೆದುಕೊಂಡು ವಾಪಸ್ ತಿರುಗುವಷ್ಟರಲ್ಲಿ ಆ ಹುಡುಗ ನನ್ನ ಬುಗುರಿಯ ಸಮೇತ ನಾಪತ್ತೆಯಾಗಿ ಬಿಟ್ಟಿದ್ದ. ಮೊದಲ ಬಾರಿಗೆ ನನಗೆ ಜಗತ್ತಿನ ಮತ್ತೊಂದು ಮುಖದ ಪರಿಚಯವಾಗಿತ್ತು.
- ಅಶೋಕ ಓಜಿನಹಳ್ಳಿ , ಉಪನ್ಯಾಸಕರು ಕೊಪ್ಪಳ.
* * * * *
ಅದು ಬಹುಶಃ 1986. ಗರ್ಲ್ಸ್ ಹೈಸ್ಕೂಲ್ ಕಟ್ಟಡದ ಒಂದು ಕೋಣೆಯಲ್ಲಿದ್ದ ಸರದಾರಗಲ್ಲಿ ಕಿ.ಪ್ರಾ. ಶಾಲೆಯಲ್ಲಿ ನಾನಾಗ ಎರಡನೇ ಕ್ಲಾಸ್ , ಶಾಲೆ ಅಂದ್ರೆ ಒಂದು ಕೋಣೆ ಇಬ್ಬರು ಶಿಕ್ಷಕರು 1 ರಿಂದ 4 ತರಗತಿ.
ಕೊಪ್ಪಳದಲ್ಲಿ ಆಗ ಗುರುವಾರ ಮಾತ್ರ ಸಂತೆ. ಆವತ್ತು ಗುರುವಾರ ಬಜಾರಕ್ಕೆ ಹೋಗಿದ್ದ ನಮ್ಮ ತಂದೆ ಸೆಲ್ ನ ಆಟೋಮ್ಯಾಟಿಕ್ ವಾಚ್ ತಂದು ನನ್ನ ಕೈಗೆ ಕಟ್ಟಿದರು. ಅದರ ಬೆಲೆ ಆಗ 35 ರೂಪಾಯಿ ಅಂತೆ.
ವಾಚ್ ನಲ್ಲಿ ಗಂಟೆ ಮತ್ತು ನಿಮಿಷದ ಅಂಕೆ ನಡುವೆ ಎರಡು ಚುಕ್ಕೆಗಳು ಮಾಯ ಆಗೋದು ಮತ್ತೆ ಕಾಣಿಸೋದು ನೋಡಿ ಪುಳಕ ಆಗೋದು. ಆ ಚುಕ್ಕೆಗಳು ಮಾಯ ಆಗಿ ಮತ್ತೆ ಕಾಣಿಸಿದರೆ ಒಂದು ಸೆಕೆಂಡ್ ಅಂತ ಕೌಂಟ್.
ಆ ವಾಚ್ ನ ಬಲಕ್ಕೆ ಮೇಲಿನ ಚಿಕ್ಕ ಬಟನ್ ಒತ್ತಿದರೆ ದಿನಾಂಕ ತಿಂಗಳು ತೋರಿಸುತ್ತಿತ್ತು. ಕೆಳಗಿನ ಬಟನ್ ಒತ್ತಿದರೆ ವಾಚ್ ಒಳಗಿನ ಲೈಟ್ ಹೊತ್ತಿಕೊಳ್ಳುತ್ತಿತ್ತು. ಮನೆಗಳಲ್ಲಿ ಕರೆಂಟ್ ಇಲ್ಲದ , ಸರಿಯಾಗಿ ಬೀದಿ ದೀಪಗಳು ಇಲ್ಲದ ಆ ದಿನಗಳ ರಾತ್ರಿ ಹೊತ್ತು ಆಡುವಾಗ ಆಗಾಗ ವಾಚ್ ನ ಲೈಟ್ ಹೊತ್ತಿಸಿ ಟೈಂ ನೋಡುತ್ತಿದ್ದೆ.
ಆ ಆಟೋಮ್ಯಾಟಿಕ್ ವಾಚ್ ಗೆ ನೀರು ಬೀಳಬಾರದು ಅಂತ ನಮ್ಮ ತಂದೆ ಹೇಳಿದ್ರು. ಒಂದಿನ Intervel ನಲ್ಲಿ ಗರ್ಲ್ಸ್ ಹೈಸ್ಕೂಲ್ ನ ವಾಟರ್ ಟ್ಯಾಂಕ್ ಗೆ ನೀರು ಕುಡಿಯಲು ಹೋದೆ ಜೊತೆಗೆ ಇಬ್ಬರೊ ಮೂವರೊ ಗೆಳೆಯರು ಇದ್ದರು. ನಳಕ್ಕೆ ಎರಡೂ ಕೈಯಿಂದ ಬೊಗಸೆ ಹಿಡಿದು ನೀರು ಕುಡಿಯಬೇಕಲ್ಲ ವಾಚ್ ತೋಯ್ದರೆ ಗತಿ ಏನು ಅಂತ ಅದಕ್ಕೆ ವಾಚ್ ಬಿಚ್ಚಿ ಪಕ್ಕಕ್ಕೆ ಇಟ್ಟು ನೀರು ಕುಡಿಯತ್ತಿದ್ದೆ. ಪಕ್ಕದ ನಳದ ನೀರು ಕುಡಿಯುತ್ತಿದ್ದ ಹೈಸ್ಕೂಲ್ ನವನ ಥರ ಇದ್ದವನು ಸಡನ್ನಾಗಿ ನನ್ನ ವಾಚ್ ತಗೊಂಡು ಓಡಿ ಹೋಗಿ ಬಿಟ್ಟ. ನನಗೆ ಗಾಬರಿ, ಅಳು...
ಅಳುತ್ತ ಶಾಲೆಗೆ ಬಂದಾಗ ಸರ್ ಗೆ ವಿಷಯ ಗೊತ್ತಾಗಿ ಆಗ ನಾಲ್ಕನೆ ತರಗತಿಯಲ್ಲಿದ್ದ ಮುಂದಾಳತ್ವ ವಹಿಸುತ್ತಿದ್ದ ಕಾಸಿಂ ಸರದಾರ ( ಈಗ ಕಾರ್ಮಿಕ ಮುಖಂಡರು ) ಅವರ ಜೊತೆ ಇನ್ನಿಬ್ಬರನ್ನು ಜೊತೆ ಮಾಡಿ ನನ್ನ ಕಳಿಸಿದರು ವಾಚ್ ತಗೊಂಡು ಓಡಿ ಹೋದವನ ಹುಡುಕಲು...
ತಾಲೂಕು ಪಂಚಾಯತ್ ಕಂಪೌಂಡ್ ನಲ್ಲಿದ್ದ ಪಾರ್ಕ್ ( ಈಗ ಅಲ್ಲಿ ಸಭಾಂಗಣ ಆಗಿದೆ ) ನಲ್ಲಿ , ಗ್ರೌಂಡ್ ನಲ್ಲಿ, ಈಗಿನ ತಹಶೀಲ್ ಕಚೇರಿ ( ಆಗ ತಹಶೀಲ್ ಕಚೇರಿ ಅಲ್ಲಿ ಇರಲಿಲ್ಲ ) ಕ್ರಾಸ್ ಎಲ್ಲ ಕಡೆ ನೋಡಿದೇವು ಯಾರೂ ಕಾಣಲಿಲ್ಲ. ( ಆಗ ಜನರ ಓಡಾಟವೂ ಕಡಿಮೆ )
ಮಧ್ಯಾಹ್ನ ಊಟಕ್ಕೆ ಮನೆಗೆ ಹೋದಾಗ ವಿಷಯ ಗೊತ್ತಾಗಿ ನಮ್ಮ ತಂದೆ ಏನೂ ಅನ್ನದೆ ಸುಮ್ಮನಾದ್ರು.
ನಂತರ ಯಾರೆ ಹೈಸ್ಕೂಲ್ ಓದೋ ತರಹದವರು ಕಂಡ್ರೆ ಅವರ ಕೈ ನೋಡುತ್ತಿದ್ದೆ ನನ್ನ ವಾಚ್ ಇರಬಹುದಾ ಅಲ್ಲಿ ಅಂತ...
ಎಷ್ಟೊ ದಿನ ಆ ವಾಚ್ ನೆನಪಾಗುತ್ತಿತ್ತು. ಕದ್ದುಕೊಂಡು ಹೋದವನ ಮೇಲೆ ಸಿಟ್ಟಿಲ್ಲ. ಆದರೂ ಆ ವಾಚ್ ಈಗಲೂ ನೆನಪಾಗುತ್ತೆ...ಮಾಯವಾಗುವ ಆ ಚುಕ್ಕೆಗಳು... ರಾತ್ರಿ ಹೊತ್ತು ವಾಚ್ ನ ಲೈಟ್ ಹೊತ್ತಿಸುತ್ತಿದ್ದದ್ದು ಎಲ್ಲ ನೆನಪಾಗುತ್ತೆ...
- ಹುಸೇನ್ ಪಾಷಾ ಕೊಪ್ಪಳ