ಸರ್ವ ಜನಾಂಗದ ತೋಟ ಎಂದೇ ಕವಿ ಕುವೆಂಪುರವರ ಕಾವ್ಯದಲ್ಲಿ ಬಣ್ಣಿಸಲ್ಪಟ್ಟಿದೆ ಕರ್ನಾಟಕ ರಾಜ್ಯ.
ಇಂದು ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಸೌಹಾರ್ದ ಯುಗಾದಿ ಆಚರಣೆ ಮಾಡಲಾಯಿತು.
ಹಿಂದು ಮುಸ್ಲಿಂ ಸಮುದಾಯದವರು ಸೇರಿ ಯುಗಾದಿಯ ಬೇವು ಬೆಲ್ಲವನ್ನು ಸವಿದರು. ನಾವೆಲ್ಲ ಭಾರತೀಯರು ನಮ್ಮ ಆಚರಣೆಗಳು ಏನೇ ಇರಲಿ ನಾವೆಲ್ಲ ಒಂದೇ, ಮಾನವ ಧರ್ಮವೇ ಮುಖ್ಯ ಎಂದು ಸಾರಿದರು.
ಕೊಪ್ಪಳದ ತಾಲೂಕಾ ಕ್ರೀಡಾಂಗಣದಲ್ಲಿ ಜೀವಪರ, ಜನಪರ ಸಂಘಟನೆಗಳು ಹಾಗು ಸೌಹಾರ್ದ ವೇದಿಕೆಯಿಂದ ಸೌಹಾರ್ದ ಯುಗಾದಿ ಆಚರಿಸಿದರು. ನೂರಾರು ಜನ ಹಿಂದು, ಮುಸ್ಲಿಂರ ಒಂದೆಡೆ ಸೇರಿ ಬೇವು ಬೆಲ್ಲವನ್ನು ಸವಿದು. ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರಿದರು. ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ನಾಡಿನ ಸಂಸ್ಕೃತಿ ಒಗ್ಗಟ್ಟಿನಿಂದ ಕೂಡಿದೆ. ಇಲ್ಲಿ ಆಯಾಯ ಧರ್ಮದವರು ತಮ್ಮ ಆಚರಣೆಯನ್ನು ಮಾಡುತ್ತಾರೆ, ಬಹು ಸಂಸ್ಕೃತಿ , ಬಹು ಭಾಷೆ ಹೊಂದಿರುವ ದೇಶವಾಗಿದೆ. ಅವರವರ ಆಚರಣೆಯನ್ನು ಮಾಡಲು ಯಾವುದೇ ಅಡ್ಡಿ ಇಲ್ಲ. ಆಚರಣೆಗಳಿಂದ ಯಾರಿಗೂ ಹಾನಿ ಇಲ್ಲ ಆದರೆ ಈಗ ಬೇರೆ ಬೇರೆ ಕಾರಣಕ್ಕಾಗಿ ವಿವಾದ ಉಂಟಾಗಿದೆ, ಈ ವಿವಾದದಿಂದ ಜನರ ಮನಸ್ಸು ಕೆಡುತ್ತಿದೆ. ಮೊದಲಿನಿಂದ ನಮ್ಮ ದೇಶವು ಸೌಹಾರ್ದಯುತವಾಗಿದೆ ಇದನ್ನೆ ಮುಂದುವರಿಸಿಕೊಂಡು ಹೋಗೋಣ ಎಂದರು.
ಗುರುಗಳಾದ ಮಹ್ಮದ್ ಹೈದರ ಅಲಿ ಮಾತನಾಡಿ ನಾವೆಲ್ಲ ಭಾರತೀಯರು, ಭಾರತ ಮಾತೆಯ ನೆಲದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳೋಣ. ನಮ್ಮ ನಮ್ಮ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸೋಣ, ಭಿನ್ನಾಭಿಪ್ರಾಯ ಬೇಡ ಎಲ್ಲರು ಒಂದೇ ತಾಯಿ ಮಕ್ಕಳಂತೆ ಬಾಳೋಣ ಎಂದು ಹೇಳಿದರು.