ಬಹುಶಃ ಏಳು ವರ್ಷಗಳಾದವು. ತುಂಗಭದ್ರೆಯ ಮಗ್ಗುಲಲ್ಲಿ ಅಪ್ಪು ಅಭಿನಯದ 'ರಣವಿಕ್ರಮ' ಸಿನಿಮಾ ಶೂಟಿಂಗ್ ನಡೆದು.
ಆನೆಗೊಂದಿ-ಹಂಪಿ ನಡುವೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಅರ್ಧ ಕಾಮಗಾರಿ ಆಗಿದ್ದಾಗ ಕುಸಿದು ಬಿತ್ತಲ್ಲ ಅದೇ ತುಂಗಭದ್ರಾ ನದಿ ಆಚೆ ಅಂದ್ರೆ ಹಂಪಿ ಕಡೆ ಗುಡ್ಡದ ಪ್ರದೇಶದಲ್ಲಿ ಪುನೀತ್ ರಾಜಕುಮಾರರವರ ' ರಣವಿಕ್ರಮ' ಸಿನಿಮಾಗಾಗಿ ಹಳ್ಳಿಯ ಸೆಟ್ ಹಾಕಲಾಗಿತ್ತು.
ಸ್ವಾತಂತ್ರ್ಯ ಪೂರ್ವ ಕಾಲದ 'ವಿಕ್ರಮ ತೀರ್ಥ' ಹಳ್ಳಿಯ ಸೆಟ್ ಅದು. ಅಲ್ಲಿ ಸೆಟ್ ಹಾಕುವವರೆಗೆ ಯಾರಿಗೂ ಸುಳಿವು ಇರಲಿಲ್ಲ ಅಲ್ಲಿ ಶೂಟಿಂಗ್ ನಡೆಯಲಿದೆ ಅಂತ. ನಂತರ ಶೂಟಿಂಗ್ ಆರಂಭವಾದ ಮೇಲೆ ಸುದ್ದಿ ಹಬ್ಬಿತು. 'ಪುನೀತ್ ರಾಜಕುಮಾರ ನಮ್ಮ ಜಿಲ್ಲೆ ಹತ್ತಿರ ಶೂಟಿಂಗ್ ಗೆ ಬಂದಿದ್ದಾರಾ' ಅನ್ನೋದು ಕೊಪ್ಪಳ ಜಿಲ್ಲೆಯವರ ಆನಂದದ ಉದ್ಘಾರ.
ದಿನೇ ದಿನೆ ಅಭಿಮಾ
ನಿಗಳು, ಸಿನಿಮಾ ಪ್ರಿಯರು ಸೆಟ್ ಬಳಿ ಜಮಾಯಿಸತೊಡಗಿದರು. ಮುರಿದು ಬಿದ್ದ ತೂಗು ಸೇತುವೆಯ ಅವಶೇಷಗಳ ಹತ್ರ ಬೆಳಗ್ಗೆಯೇ ಅಭಿಮಾನಿಗಳು ಹಾಜರ್. ತುಂಗಭದ್ರಾ ಆಚೆ ಸೆಟ್ ಗೆ ಬರಲಿರುವ ತಮ್ಮ ಆರಾಧ್ಯದ ಅಪ್ಪು ನೋಡಬೇಕು ಅನ್ನುವ ಆಸೆ. ಇಂಜಿನ್ ಚಾಲಿತ ಬೋಟ್ ಗಳು ನಿತ್ಯ ಸಾವಿರಾರು ಅಭಿಮಾನಿಗಳನ್ನು ಇತ್ತಕಡೆಯಿಂದ ಅತ್ತಕಡೆ ಕರೆದುಕೊಂಡು ಹೋಗಿ ಬರೋದು ಮಾಡತೊಡಗಿದವು. ಅವರಿಗೆ ಭರ್ಜರಿ ದುಡಿಮೆ.
ದಿನವೂ ಶೂಟಿಂಗ್ ನೋಡಲು ಬರುವ ಅಭಿಮಾನಿಗಳ ಸಂಖ್ಯೆ ಸಾವಿರಗಟ್ಟಲೆ ಹೆಚ್ಚಾಗತೊಡಗಿತು. ನದಿ ಪಕ್ಕದ ಗುಡ್ಡದಲ್ಲಿದ್ದ ಹಳ್ಳಿ ಸೆಟ್ ನಿಂದ ದೂರ ನಿಂತು ಅಭಿಮಾನಿಗಳು ಅಪ್ಪು ಅಪ್ಪು ಅಂತ ಅಭಿಮಾನದಿಂದ ಕೂಗುತ್ತಿದ್ದರು. ಆಗ ಅಪ್ಪು ದಿನಕ್ಕೆ ನಾಲ್ಕು ಸಲ ಅಭಿಮಾನಿಗಳ ಹತ್ತಿರ ಬಂದು ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದರು. ಅಭಿಮಾನಿಗಳತ್ತ ಕೈ ಬಿಸಿ ಅವರ ಖುಷಿ ಕಂಡು ಸಂತೋಷದಿಂದ ಸೆಟ್ ಗೆ ಹೋಗುತ್ತಿದ್ದರು.
ಶೂಟಿಂಗ್ ನಲ್ಲಿ ಹಿರಿಯ ನಟರಾದ ಅವಿನಾಶ್, ರಂಗಾಯಣ ರಘು, ನಾಯಕಿ ಅಂಜಲಿ ಸೇರಿದಂತೆ ನೂರಾರು ಕಲಾವಿದರು ಇರುತ್ತಿದ್ರು.
ಬಂಡೆ ಕಲ್ಲುಗಳ ಮಧ್ಯೆ ನಿಂತು ಅಪ್ಪು ನೋಡಲು ಕಾತರರಾಗಿ ನಿರಾಶೆಯಾದ ಅಭಿಮಾನಿಗಳು ಅರ್ಧ ಮುರಿದು ಬಿದ್ದ ಆನೆಗೊಂದಿ ಸೇತುವೆಯ ಉಳಿದ ಅವಶೇಷದ ಮೇಲೆ ಹತ್ತಿ ನಿಂತು ಅಪ್ಪು ನೋಡಲು ಪ್ರಯತ್ನಿಸುತ್ತಿದ್ರು.
ನಾವು ಹೋದ ಹಿಂದಿನ ದಿನ ಸಂಜೆ ಹಳ್ಳಿಯ ಸೆಟ್ ಹತ್ತಿರ ಇದ್ದ ನಿಜವಾದ ಕಲ್ಲಿನ ಮಂಟಪದ ಹತ್ತಿರ ಗೌರಿ....ಗೌರಿ ಹಾಡಿನ ಶೂಟಿಂಗ್ ಆಗಿತ್ತು. ಸುಮಾರು ದಿನ ಶೂಟಿಂಗ್ ನಡೆದು ರಣವಿಕ್ರಮ ಬಿಡುಗಡೆ ಆಗಿ ಯಶಸ್ಸು ಕಂಡಿತು.
ಇವತ್ತು ಅಪ್ಪು ಇಲ್ಲ. ಆನೆಗೊಂದಿ ಬಳಿ ಹೋದಾಗ ಅಪ್ಪು ಶೂಟಿಂಗ್ ನೆನಪಾಗುತ್ತವೆ.
-------------------------
ಟಿವಿ ರಿಪೋರ್ಟ್‌ರ್ ಒಬ್ಬಾಕೆ ವಿಕ್ರಮ ತೀರ್ಥ ಎಂಬ ಹಳ್ಳಿ ಬಗ್ಗೆ ಓದಿ ಅದನ್ನು ನೋಡಲು(ವರದಿಗಾಗಿ) ಹೋಗಿ ನಾಪತ್ತೆ ಆಗ್ತಾಳೆ. ಮುಂದೇನು ಕತೆ ? ಎಂಬುದು ರಣವಿಕ್ರಮ ನೋಡಿ (ನೋಡಿಲ್ಲವಾದರೆ)
ಬೆಂಗಳೂರಿನಲ್ಲಿ ಮೆಟ್ರೊ ಆರಂಭವಾದ ಮೇಲೆ ಮೆಟ್ರೊದಲ್ಲಿ ಶೂಟಿಂಗ್ ನಡೆದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ರಣವಿಕ್ರಮ ಸಿನಿಮಾದ್ದು.